ಮೈಸೂರು: ಸುಮಾರು 127 ಕೋಟಿ ರೂ ವೆಚ್ಚದಲ್ಲಿ ನಗರದ ಬನ್ನಿ ಮಂಟಪದಲ್ಲಿ ಹೈಟೆಕ್ ಬಸ್ ನಿಲ್ದಾಣ ಮಾಡುವುದಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ.
ಸಬರ್ಬನ್ ನಿಲ್ದಾಣದಲ್ಲಿ ಪ್ರತಿನಿತ್ಯ 2700ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಸ್ಥಳಾವಕಾಶದ ಕೊರತೆಯಿಂದಾಗಿ ಹೆಚ್ಚುವರಿ ಬಸ್ ನಿಲ್ದಾಣಕ್ಕೆ ಸರ್ಕಾರ ಮುಂದಾಗಿದೆ.
ನಗರದ ಮಧ್ಯ ಭಾಗದಲ್ಲಿರುವ ಸಬರ್ಬನ್ ಬಸ್ ನಿಲ್ದಾಣವನ್ನು ಯಾವುದೇ ಕಾರಣಕ್ಕೂ ಸಂಪೂರ್ಣವಾಗಿ ಸ್ಥಳಾಂತರ ಮಾಡುವುದಿಲ್ಲ. ಅಂತರ್ ರಾಜ್ಯ ಬಸ್‌ಗಳನ್ನು ಮಾತ್ರ ಅಲ್ಲಿಂದ ಕಾರ್ಯಾಚರಣೆ ಮಾಡಲಾಗುತ್ತದೆ. ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಭಾಗದ ಎಲ್ಲಾ ಬಸ್‌ಗಳ ಸಂಚಾರ ಇಲ್ಲೇ ಆಗುತ್ತದೆ ಎಂದು ಮೈಸೂರು ಗ್ರಾಮಾಂತರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಿವಾಸ್ ತಿಳಿಸಿದ್ದಾರೆ.
ಬನ್ನಿಮಂಟಪದ 64 ಎಕರೆ ಪ್ರದೇಶದಲ್ಲಿ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ 14 ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುತ್ತದೆ. ಸರ್ಕಾರದಿಂದ ಅನುದಾನ ಬಿಡುಗಡೆ ಆದ ತಕ್ಷಣ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಏಪ್ರಿಲ್ ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದ್ದು, ಇನ್ನು ಎರಡು ವರ್ಷಗಳಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ ಆಗಲಿದೆ ಎಂದಿದ್ದಾರೆ.





