ಮೈಸೂರು: ಇತ್ತೀಚೆಗೆ ಜರ್ಮನ್, ಆಫ್ರಿಕಾದಿಂದ ತಂದಿರುವ ಹಂಟರ್ ಗೊರಿಲ್ಲಾ, ಚೀತಾ, ಜಾಗ್ವಾರ್ ಸೇರಿದಂತೆ ಅನೇಕ ಪ್ರಾಣಿಗಳನ್ನು ಸಾಕುವ ವೆಚ್ಚ ಬಲು ದುಬಾರಿಯಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮೃಗಾಲಯದ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂದು ಮೃಗಾಲಯ ಕಾರ್ಯನಿರ್ವಾಹಕ ಅಧಿಕಾರಿ ರಂಗಸ್ವಾಮಿ ಹೇಳಿದ್ದಾರೆ.
ನಾಳೆಯಿಂದ ಮೈಸೂರು ಮೃಗಾಲಯದ ಪ್ರವೇಶ ದರ ಶೇಡಕಾ.20 ರಷ್ಟು ಹೆಚ್ಚಳವಾಗಲಿದೆ. ನಾಲ್ಕು ವರ್ಷಗಳ ನಂತರ ದರ ಪರಿಷ್ಕರಣೆ ಮಾಡಲಾಗಿದ್ದು, ವಯಸ್ಕರಿಗೆ 100ರೂ ಇದ್ದ ಟಿಕೆಟ್ ದರ 120 ರೂಗೆ ಏರಿಕೆಯಾಗಿದೆ. ಮಕ್ಕಳಿಗೆ 50 ರೂ ಇದ್ದ ದರ 60ಕ್ಕೆ ಏರಿಕೆಯಾಗಿದೆ. ಮೃಗಾಲಯ, ಕಾರಂಜಿ ಕಾಂಬೋಗೆ ವಯಸ್ಕರಿಗೆ 150 ರೂ ನಿಗದಿಯಾಗಿದ್ದು, ಮಕ್ಕಳಿಗೆ 80 ರೂ ನಿಗದಿ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಮೃಗಾಲಯ ಕಾರ್ಯನಿರ್ವಾಹಕ ಅಧಿಕಾರಿ ರಂಗಸ್ವಾಮಿ ಅವರು, ಒಂದು ದಿನಕ್ಕೆ ಮೃಗಾಲಯದ ನಿರ್ವಹಣೆಗೆ ಸುಮಾರು 9 ಲಕ್ಷ ಖರ್ಚಾಗುತ್ತಿದೆ. ಮೃಗಾಲಯದ ಪ್ರಾಣಿಗಳ ಖರ್ಚುವೆಚ್ಚ ತುಟ್ಟಿಯಾಗಿರುವ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಬಳಿಕ ಮೃಗಾಲಯದ ಪ್ರವೇಶ ದರದಲ್ಲಿ ಏರಿಕೆ ಮಾಡಲಾಗಿದೆ. ಇತ್ತೀಚೆಗೆ ಜರ್ಮನ್, ಆಫ್ರಿಕಾದಿಂದ ತಂದಿರುವ ಹಂಟರ್ ಗೊರಿಲ್ಲಾ, ಚೀತಾ, ಜಾಗ್ವಾರ್ ಸೇರಿದಂತೆ ಪ್ರಾಣಿಗಳನ್ನು ಸಾಕುವ ವೆಚ್ಚ ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ದರ ಏರಿಕೆ ಮಾಡಲಾಗುತ್ತಿದೆ. ಆದ್ದರಿಂದ ಪ್ರವಾಸಿಗರು ದರ ಏರಿಕೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.





