Mysore
17
overcast clouds

Social Media

ಗುರುವಾರ, 08 ಜನವರಿ 2026
Light
Dark

ಮೈಸೂರು | ಪಿಸಿ ಮೇಲೆ ಹಲ್ಲೆ, ಮೊಬೈಲ್‌ ದೋಚಿದ ಖದೀಮರು ; ನಾಲ್ವರ ಬಂಧನ

ಮೈಸೂರು : ಮಾದಕ ವ್ಯಸನಿಗಳಾದ ನಾಲ್ವರು ಯುವಕರ ತಂಡ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಮೊಬೈಲ್ ದೋಚಿರುವ ಘಟನೆ ನಗರದಲ್ಲಿ ನಡೆದಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ನಾಲ್ವರನ್ನೂ ಬಂಧಿಸಿದ್ದಾರೆ.

ಎನ್.ಆರ್.ಪೊಲೀಸ್ ಠಾಣೆ ವ್ಯಾಪ್ತಿಯ ರಾಜೀವನಗರ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ವಿಶೇಷ ಶಾಖೆಯಲ್ಲಿ ಕೆಲಸ ನಿರ್ವಹಿಸುವ ಹಾಗೂ ಕೆಸರೆ ನಿವಾಸಿ ಚಂದ್ರಶೇಖರ್ ಎಂಬ ಕಾನ್ಸ್‌ಟೆಬಲ್ ಹಲ್ಲೆಗೊಳಗಾದವರು.

ಎನ್‌ಆರ್ ಮೊಹಲ್ಲಾ ನಿವಾಸಿಗಳಾದ ಕಾರ್ತಿಕ್, ಅಮೋಘ್, ವಿಜಯ್ ಹಾಗೂ ಭರತ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ್ ಅವರು ಜ.೭ರ ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ರಸ್ತೆಯ ಅಂಗಡಿಯೊಂದರ ಹಿಂದೆ ಯುವಕರ ಗುಂಪೊಂದು ನಿಂತಿರುವುದನ್ನು ಗಮನಿಸಿದ್ದಾರೆ. ಅವರು ಅಸಂಬದ್ಧವಾಗಿ ಮಾತನಾಡುತ್ತಿದ್ದರಿಂದ ಅವರು ಮಾದಕ ವ್ಯಸನಿಗಳಾಗಿರಬಹುದು ಎಂದು ಅನುಮಾನಿಸಿದ್ದಾರೆ.

ಈ ಸಂಬಂಧ ಅವರನ್ನು ಪ್ರಶ್ನಿಸಿದ್ದಾರೆ. ಇದು ಯುವಕರ ಕೋಪಕ್ಕೆ ಕಾರಣವಾಗಿದೆ. ನಂತರ ಯುವಕರು ಚಂದ್ರಶೇಖರ್ ಅವರೊಡನೆ ಜಗಳಕ್ಕಿಳಿದಿದ್ದಾರೆ. ಗಲಾಟೆಯ ಸಮಯದಲ್ಲಿ, ಆರೋಪಿಗಳಲ್ಲಿ ಒಬ್ಬನು ಚಂದ್ರಶೇಖರ್ ಅವರನ್ನು ಕಲ್ಲಿನಿಂದ ಹೊಡೆದಿದ್ದಾನೆ. ಚಂದ್ರಶೇಖರ್ ಅವರು ತನ್ನನ್ನು ಪೊಲೀಸ್ ಎಂದು ಪರಿಚಯಿಸಿಕೊಂಡ ನಂತರವೂ ಸಹ, ಮೂವರು ಯುವಕರು ಚಂದ್ರಶೇಖರ್ ಅವರ ಬಳಿ ಇದ್ದ ೫೦೦ ರೂ. ನಗದು ಮತ್ತು ಮೊಬೈಲ್ ಫೋನ್ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಸಾರ್ವಜನಿಕರ ಸಹಾಯದೊಂದಿಗೆ ಆರೋಪಿಗಳಲ್ಲಿ ಒಬ್ಬನಾದ ಕಾರ್ತಿಕ್ ಎಂಬಾತನನ್ನು ಬಂಧಿಸುವಲ್ಲಿ ಚಂದ್ರಶೇಖರ್ ಯಶಸ್ವಿಯಾಗಿದ್ದಾರೆ. ವಿಚಾರಣೆಗಾಗಿ ಕಾರ್ತಿಕ್‌ನನ್ನು ಎನ್.ಆರ್. ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.

ವಿಚಾರಣೆ ವೇಳೆ ಆರೋಪಿಯು ತನ್ನ ಮೂವರು ಸಹಚರರ ಹೆಸರುಗಳನ್ನು ಬಹಿರಂಗಪಡಿಸಿದ್ದಾನೆ. ಕೂಡಲೇ ಕಾರ್ಯಪ್ರವೃತ್ತರಾದ ಎನ್‌ಆರ್ ಠಾಣಾ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.  ಈ ಸಂಬಂಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ನರಸಿಂಹರಾಜ ಉಪವಿಭಾಗದ ಎಸಿಪಿ ಕೆ.ಟಿ.ಮ್ಯಾಥ್ಯೂ ಥಾಮಸ್ ಮತ್ತು ಎನ್.ಆರ್. ಪೊಲೀಸ್ ಇನ್ಸ್‌ಪೆಕ್ಟರ್ ಕುಮಾರ್ ಭೇಟಿ ನೀಡಿದ್ದರು.

 

Tags:
error: Content is protected !!