ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧವೇ ನೇರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಡಿ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ರಾಜ್ಯಪಾಲರಿಗೆ ಸಲಹೆ ನೀಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಡಾ ಹಗರಣ ಗಬ್ಬೆದ್ದು ನಾರುತ್ತಿದೆ. ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧವೇ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದರೂ ಕ್ಯಾಬಿನೆಟ್ ಮೀಟಿಂಗ್ ಕರೆದು ಪ್ರಾಸಿಕ್ಯೂಷನ್ ವಿರುದ್ಧ ನಿರ್ಣಯ ಕೈಗೊಂಡಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರವನ್ನು ಅಮಾನತ್ತಿನಲ್ಲಿಡಿ ಎಂದು ಆಗ್ರಹಿಸಿದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ತನಿಖೆ ನಡೆಸಬೇಕಿದೆ. ಮುಡಾ ಹಗರಣದ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ರಾಷ್ಟ್ರದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ಕಾಂಗ್ರೆಸ್ ನಾಯಕರು ರಾಜ್ಯಪಾಲರನ್ನೇ ಕೆಟ್ಟ ಭಾಷೆಯಲ್ಲಿ ಹೀಗಳೆಯುವುದು ಗೌರವ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಕೈಕೆಳಗೇ ದಾಖಲೆ ತಿದ್ದುವ ಕೆಲಸ ನಡೆಯುತ್ತಿದೆ. ಸಿಎಂ ಪತ್ನಿಗೆ ಸಂಬಂಧಪಟ್ಟ ದಾಖಲೆಗಳಿಗೆ ವೈಟ್ನರ್ ಹಾಕಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.