ಮೈಸೂರು: ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಒಂದೇ ದಿನದಲ್ಲಿ ಬರೋಬ್ಬರಿ 848 ನಿವೇಶನಗಳ ಖಾತೆಯನ್ನು ಮಾಡಿಸಿಕೊಂಡಿದ್ದಾರೆ ಎನ್ನಲಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಅವರು ರಾಜೀವ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿ.ಎಸ್.ಶ್ರೀವತ್ಸ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲಾ ಹಗರಣಗಳನ್ನು ಮಾಡಿ ರಕ್ಷಣೆ ಮಾಡಿಕೊಳ್ಳಲೆಂದೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಎಲ್ಲಾ ಹಗರಣಗಳಿಂದ ನಾನು ರಕ್ಷಣೆ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್‌ಗೆ ಹಾರಿ ಹೋಗಿದ್ದಾರೆ ಎಂದು ರಾಜೀವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಾಮಗಾರಿ ಪೂರ್ಣ ಆಗದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಆದರೂ ಸರ್ಕಾರ ಮಾತ್ರ ಯಾವುದೇ ಕ್ರಮ ವಹಿಸಿಲ್ಲ. ಈಗಲಾದರೂ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಯಾರೇ ತಪ್ಪು ಮಾಡಿದ್ದರೂ ಅವರನ್ನು ರಕ್ಷಿಸದೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.