ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ಸಂಗೀತದ ರಸದೌತಣ ನೀಡಿದರು,
ಅರಮನೆಯಲ್ಲಿ ಆಯೋಜಿಸಿರುವ ಮಾಗಿ ಉತ್ಸವದ ಎರಡನೇ ದಿನವಾದ ಇಂದು ನೆರೆದಿದ್ದ ಹಲವಾರು ಪ್ರೇಕ್ಷಕರಿಗೆ ವಿಜಯ ಪ್ರಕಾಶ್ ಸಂಗೀತದ ಹೊನಲು ಹರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ವಿಜಯ್ ಹಾಗೂ ಲಕ್ಷ್ಮೀ ನಾಗರಾಜ್ ಜೋಡಿಯು ಹಾಡನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ದರು.
ಗಾಯಕರಾದ ನಿಖಿಲ್ ಪಾರ್ಥಸಾರಥಿ, ಶಾಶ್ವತಿ ಕಶ್ಯಪ್, ಶಶಿಕಲಾ ಸುನಿಲ್ ಸೇರಿದಂತೆ ಮೊದಲಾದ ಕಲಾವಿದರ ತಂಡವು ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನ ಗೆದ್ದಿತು.
ವಾರಾಂತ್ಯವಾದ್ದರಿಂದ ಇಂದು ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಭೇಟಿ ನೀಡಿ, ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಿ ಖುಷಿಪಟ್ಟರು.