ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ ಆರೋಪ ಕೇಳಿ ಬಂದಿದೆ.
ನಗರದ ಜನತಾನಗರದ ಖಾಸಗಿ ಅಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿಯಾಗಿದ್ದಾರೆ. ಲಕ್ಷ್ಮಿ(14) ಮೃತಪಟ್ಟ ಬಾಲಕಿ.
ಜನತಾ ನಗರದಲ್ಲಿ ವಾಸವಾಗಿರುವ ಬಾಲಕಿ ಲಕ್ಷ್ಮೀ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಹೋದ ತಕ್ಷಣ ಎಕ್ಸ್‌ರೇ, ಸ್ಕ್ಯಾನಿಂಗ್ ಏನು ಮಾಡದೆ ಏಕಾಏಕಿ ಆಪರೇಷನ್ ಮಾಡಿದ್ದಾರೆ. ಬಳಿಕ ಅಧಿಕ ಪ್ರಮಾಣದಲ್ಲಿ ಅನಾಸ್ತೇಶಿಯ ನೀಡಿದ ಪರಿಣಾಮ ಇಂದು(ಡಿಸೆಂಬರ್.22) ಯುವತಿ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಬಾಲಕಿಯ ದುರ್ಮರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿದ ಖಾಸಗಿ ಆಸ್ಪತ್ರೆಯ ವೈದ್ಯರೇ ಕಾರಣ. ಅವರ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಯುವತಿ ಸಾವಿನಿಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಆಸ್ಪತ್ರೆಯ ಮುಂಭಾಗದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಸ್ವತಿಪುರಂ ಠಾಣಾಯಲ್ಲಿ ದೂರು ದಾಖಲಾಗಿದೆ.