ಸಾವಿರಾರು ಹೆಜ್ಜೆಗಳೊಂದಿಗೆ ಆರೋಗ್ಯದ ಸಂದೇಶ
ಜ.11ರಂದು ನಡೆಯಲಿರುವ ಜಾಗೃತಿ ಅಭಿಯಾನ
ಮೈಸೂರು : ಹಲವು ಮೊದಲುಗಳಿಗೆ ನಾಂದಿ ಹಾಡಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ‘ಫಿಟ್ ಮೈಸೂರು’ ಕಾರ್ಯಕ್ರಮದ ಮೂಲಕ ಮತ್ತೊಂದು ಮಹತ್ವದ ಸಾಮಾಜಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಸಜ್ಜಾಗುತ್ತಿದೆ.
ಮೈಸೂರನ್ನು ಸುಸಜ್ಜಿತ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ, ಜಿಎಸ್‌ಎಸ್ ಸಿಎಸ್‌ಆರ್, ಜಿಮ್ ಅಸೋಸಿಯೇಷನ್ ಮತ್ತು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ‘ನಮ್ಮ ನಡಿಗೆ, ಆರೋಗ್ಯದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ಜ.11ರಂದು ನಡೆಸುತ್ತಿ ರುವ ‘ಫಿಟ್ ಮೈಸೂರು ವಾಕಥಾನ್’ಗೆ ಅರಮನೆಗಳ ನಗರಿ ಸನ್ನದ್ಧವಾಗಿದೆ.
ಆರೋಗ್ಯಕರ ಮೈಸೂರು, ಸ್ವಚ್ಛ ಮೈಸೂರು, ಹಸಿರು ಮೈಸೂರು, ಸುರಕ್ಷಿತ ಮೈಸೂರು ಎಂಬ ಆಲೋಚನೆಯೊಂದಿಗೆ ವಾಕಥಾನ್ ಅನ್ನು ಆಯೋಜಿಲಾಗಿದೆ. ಈ ಮಹತ್ವದ ಕಾರ್ಯಕ್ರಮ ಹಾಗೂ ಅದರ ಹಿಂದಿನ ಉದ್ದೇಶಗಳ ಕುರಿತಂತೆ ಜಿಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಯೋಗಾತ್ಮ ಶ್ರೀಹರಿ ದ್ವಾರಕನಾಥ್ ಅವರು ತಮ್ಮ ಅನಿಸಿಕೆ ಹಾಗೂ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.’
ಫಿಟ್ ಮೈಸೂರು ಯೋಜನೆ
ಮೈಸೂರು ವಿಶ್ವವಿದ್ಯಾನಿಲಯ, ಜಿಎಸ್‌ಎಸ್ ಸಿಎಸ್‌ಆರ್, ಜಿಮ್ ಅಸೋಸಿಯೇಷನ್ ಮತ್ತು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಜ.೧೧ರಂದು ಬೆಳಿಗ್ಗೆ ೫.೩೦ಕ್ಕೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಿಂದ ಫಿಟ್ ಮೈಸೂರು ವಾಕಥಾನ್ ಆರಂಭಗೊಳ್ಳಲಿದೆ. ಬಳಿಕ ೫ ಕಿ.ಮೀ. ವ್ಯಾಪ್ತಿಯ ವಾಕಥಾನ್ ಕುಕ್ಕರಹಳ್ಳಿ ಕೆರೆ ವ್ಯಾಪ್ತಿಯಲ್ಲಿ ಸಂಚರಿಸಿ, ಮತ್ತೆ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಮುಕ್ತಾಯಗೊಳ್ಳಲಿದೆ. ಈ ವೇಳೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ ಹಾಗೂ ವಂದೇ ಮಾತರಂ ಗಾಯನ ನಡೆಯಲಿದೆ.
ವಾಕಥಾನ್ ಆರಂಭಕ್ಕೂ ಮುನ್ನ ಝುಂಬಾ ನೃತ್ಯ ನಡೆಸಲಾಗುತ್ತದೆ. ವಾಕಥಾನ್ ಯಶಸ್ಸಿಗಾಗಿ ಗ್ರಾವಿಟಿ ಒನ್, ಕರ್ನಾಟಕ ಬ್ಯಾಂಕ್, ನಾರಾಯಣ ಹೃದಯಾಲಯ, ಎಂಡಿಜೆಎ, ಡಿಆರ್‌ಸಿ ಹಾಗೂ ಟ್ರಿಪ್ ದಾರ್ ಸೇರಿದಂತೆ ಶಾಲಾ-ಕಾಲೇಜುಗಳು, ಹಾಸ್ಟೆಲ್‌ಗಳು, ಎನ್‌ಎಸ್‌ಎಸ್, ಎನ್‌ಜಿಒಗಳು, ವಿವಿಧ ವ್ಯಾಪಾರಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಂಬಲ ನೀಡಿವೆ. ಆರಂಭಿಕ ದಿನಗಳಲ್ಲಿ ೪೦-೫೦ ಜನರಿಂದ ನಡೆಸುತ್ತಿದ್ದ ಫಿಟ್ ಮೈಸೂರು ವಾಕಥಾನ್‌ಗೆ ಇದೀಗ ಸಾವಿರಾರು ಜನರು ಭಾಗವಹಿಸುತ್ತಿದ್ದು, ಜ.೧೧ರಂದು ನಡೆಯುವ ಬೃಹತ್ ವಾಕಥಾನ್‌ನಲ್ಲಿ ಅಂದಾಜು ೭ರಿಂದ ೮ ಸಾವಿರಕ್ಕೂ ಜನರು ಸೇರುವ ನಿರೀಕ್ಷೆ ಇದೆ ಎಂದು ಶ್ರೀಹರಿ ತಿಳಿಸಿದ್ದಾರೆ.





