ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಶುರುವಾಗಿದ್ದು, ಈ ಬಾರಿ ಅದ್ಧೂರಿಯಾಗಿ ದಸರಾ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈ ಮಧ್ಯೆ ನಾವೀನ್ಯತೆ ಹಾಗೂ ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ದಚಿತ್ರ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಸಕ್ತರಿಗೆ ಸ್ತಬ್ದಚಿತ್ರ ಉಪಸಮಿತಿಯು ಆಹ್ವಾನಿಸಿದೆ.
ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ವಿನ್ಯಾಸವನ್ನು ಪೂರ್ಣಪ್ರಮಾಣದ ಸ್ತಬ್ದಚಿತ್ರ ಆಗಿ ಪರಿವರ್ತಿಸಲಾಗುವುದು. ಇದರ ಜೊತೆಗೆ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಉಪಸಮಿತಿ ತಿಳಿಸಿದೆ.
ಇನ್ನು ಈ ಸ್ಪರ್ಧೆಯಲ್ಲಿ ಎಲ್ಲಾ ಭಾರತೀಯ ನಾಗರಿಕರಿಗೆ ಅವಕಾಶವಿದ್ದು, ತಂಡವು ಒಂದು ಪ್ರವೇಶ ಪತ್ರವನ್ನು ಮಾತ್ರ ಸಲ್ಲಿಸಬಹುದಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಸ್ಪರ್ಧಿಗಳು ಸೆಪ್ಟೆಂಬರ್.13ರೊಳಗೆ ನೋಂದಾಯಿಸಬೇಕು ಎಂದು ತಿಳಿಸಲಾಗಿದೆ.
ಅತ್ಯುತ್ತಮ ಮೂರು ಸ್ತಬ್ದಚಿತ್ರಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ತಿಳಿಸಲಾಗಿದ್ದು, ಆಯ್ಕೆಯಾದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
ಇದರ ಜೊತೆಗೆ ಅತ್ಯುತ್ತಮ 10 ಕಿರು ಸ್ತಬ್ಧಚಿತ್ರಗಳನ್ನು ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.