Mysore
25
scattered clouds

Social Media

ಗುರುವಾರ, 19 ಫೆಬ್ರವರಿ 2026
Light
Dark

ಮೈಸೂರು | ಸ್ವಚ್ಛ ಸರ್ವೇಕ್ಷಣೆ ; ಜಾಥಾ ನಡೆಸಿ ಜನರಿಗೆ ಜಾಗೃತಿ

ಮೈಸೂರು : ಸ್ವಚ್ಛ ಸರ್ವೇಕ್ಷಣೆ-2026ರ ಅಂಗವಾಗಿ ನಗರಪಾಲಿಕೆ ವತಿಯಿಂದ ಶೌಚಾಲಯ ಬಳಕೆ ಹಾಗೂ ಸ್ವಚ್ಛತೆ ಕುರಿತು ವಿದ್ಯಾರ್ಥಿಗಳಿಂದ ಜಾಥಾ ಹಾಗೂ ಇನ್ನಿತರೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬುಧವಾರ ಬೆಳಿಗ್ಗೆ ನಗರದ ಪುರಭವನದ ಆವರಣದಲ್ಲಿ ಶೌಚಾಲಯ ಬಳಕೆ ಕುರಿತು ಏರ್ಪಡಿಸಲಾಗಿದ್ದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಜಾಗೃತಿ ಜಾಥಾಗೆ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಚಾಲನೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸಬೇಡಿ, ಮನೆಗಳಲ್ಲಿ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳಿ ಎಂಬಿತ್ಯಾದಿ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ಇದೇ ವೇಳೆ ಶೌಚಾಲಯಗಳನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು? ಸಾರ್ವಜನಿಕ ಶೌಚಾಲಯಗಳನ್ನು ಹೇಗೆ ಬಳಸಬೇಕು? ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸಿದಲ್ಲಿ ಆಗುವ ತೊಂದರೆಗಳೇನು? ಎಂಬುದನ್ನು ಕುರಿತು ಗಾಂಧಿ ವೃತ್ತದಲ್ಲಿ ಬೀದಿ ನಾಟಕ ಪ್ರದರ್ಶಿಸಲಾಯಿತು.

ಇದಕ್ಕೂ ಮುನ್ನ ಪುರಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಸಾರ್ವಜನಿಕ ಶೌಚಾಲಯಗಳಲ್ಲಿ ನೈರ್ಮಲ್ಯತೆ ಕಾಪಾಡಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಸಾರ್ವಜನಿಕರು ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

2016ರಲ್ಲಿ ದೇಶದ ಸ್ವಚ್ಛ ನಗರಗಳ ಪೈಕಿ ಮೈಸೂರು ಪ್ರಥಮ ಸ್ಥಾನ ಗಳಿಸಿತ್ತು. ಕಳೆದ ಬಾರಿ 3 ನೇ ಸ್ಥಾನ ಬಂದಿದೆ. ಜನರು ಸ್ವಚ್ಛತೆಯ ಬಗ್ಗೆ ನಗರಪಾಲಿಕೆಯೊಂದಿಗೆ ಕೈಜೋಡಿಸಿದರೆ ಈ ಬಾರಿ ಮೈಸೂರು ಸ್ವಚ್ಛತೆಯಲ್ಲಿ ಮತ್ತೆ ನಂ.1 ಸ್ಥಾನ ಪಡೆಯಬಹುದು ಎಂದರು.

ನಂತರ ನಗರಪಾಲಿಕೆಯಲ್ಲಿ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಹಾಗೂ ಶೌಚಾಲಯ ನಿರ್ವಹಣೆ ಮಾಡುವ ಸಿಬ್ಬಂದಿಗೆ ಆಯುಕ್ತರು ಸ್ವಚ್ಛತಾ ಕಿಟ್ ಹಾಗೂ ಸೇಫ್ಟಿ ಕಿಟ್‌ಗಳನ್ನು ವಿತರಣೆ ಮಾಡಿದರು. ಪಾಲಿಕೆ ಅಧಿಕ್ಷಕ ಅಭಿಯಂತರ ಮಂಜು, ಎಇಇ ಶಿಲ್ಪಾ, ಅಶ್ವಿನ್, ಧನುಷ್, ಅಧಿಕಾರಿಗಳಾದ ನಾಗರಾಜೇಗೌಡ, ಮುಸ್ತಾಫಾ, ರವಿಕುಮಾರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Tags:
error: Content is protected !!