ಮೈಸೂರು: ನಗರದ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗವೆಂದು ಮರುನಾಮಕರಣ ಮಾಡಿದರೆ ಇತಿಹಾಸದ ಪ್ರಮುಖ ಅಧ್ಯಾಯವನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರು ರಾಜಮನೆತನದ ರಾಜಕುಮಾರಿಯರ ಸಾಮಾಜಿಕ ಕಳಕಳಿಯ ಗೌರವಾರ್ಥವಾಗಿ ಹೆಸರಿಸಲಾಗಿರುವ ಮಾರ್ಗ, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿಯರಾದ ಮಹಾರಾಜಕುಮಾರಿ ಜಯಲಕ್ಷ್ಮಮ್ಮಣ್ಣಿ, ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ, ಮಹಾರಾಜಕುಮಾರಿ ಚೆಲುವಾಜಮ್ಮಣ್ಣಿ ಹಾಗೂ ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಅವರ ಪತಿ ಕರ್ನಲ್ ದೇಸ ರಾಜ್ ಅರಸ್ ಅವರು ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅದ್ಭುತ ಕೊಡುಗೆಯನ್ನು ಈ ರಸ್ತೆಯು ಸಂಕೇತಿಸುತ್ತದೆ ತಿಳಿಸಿದ್ದಾರೆ.
ಮಹಾರಾಜ 10ನೇ ಚಾಮರಾಜ ಒಡೆಯರ್ ಅವರ ಪುತ್ರಿಯರಾದ ಮಹಾರಾಜಕುಮಾರಿ ಜಯಲಕ್ಷ್ಮಿಯಮ್ಮಣ್ಣಿ, ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಮತ್ತು ಮಹಾರಾಜಕುಮಾರಿ ಚೆಲುವಾಜಮ್ಮಣ್ಣಿ ಅವರುಗಳ ಸಾಮಾಜಿಕ ಕಾಳಜಿ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ 1921ರಲ್ಲಿ ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಕ್ಷಯ ರೋಗ ಆಸ್ಪತ್ರೆ ಸ್ಥಾಪನೆಯು ಅವರ ನಿಸ್ವಾರ್ಥ ಸೇವೆ ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಕುಟುಂಬದ ಸಮರ್ಪಣೆಗೆ ಈ ರಸ್ತೆ ಸಾಕ್ಷಿಯಾಗದೇ ಎಂದಿದ್ದಾರೆ.
ಈ ರಸ್ತೆಯ ಮರುನಾಮಕರಣವು ಇತಿಹಾಸದ ಪ್ರಮುಖ ಅಧ್ಯಾಯವನ್ನು ಅಳಿಸಿಹಾಕುತ್ತದೆ. ಅಲ್ಲದೇ ಮೈಸೂರು ರಾಜ ಮನೆತನದ ಸಾಮಾಜಿಕ ಕೊಡುಗೆಗಳ ಸ್ಮರಣೆಯನ್ನು ಮರೆತಂತಾಗುತ್ತದೆ. ಜೊತೆಗೆ ಐತಿಹಾಸಿಕ ನಗರ ಮೈಸೂರಿನ ಪರಂಪರೆಯನ್ನು ಶಾಶ್ವತವಾಗಿ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಹೀಗಾಗಿ ನಮ್ಮ ಹೆಮ್ಮೆಯ ಪರಂಪರೆಯನ್ನು ಗೌರವಿಸೋಣ ಮತ್ತು ಉಳಿಸೋಣ ಎಂದು ಹೇಳಿದ್ದಾರೆ.