Mysore
16
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಮೋದಿ ಸರಕಾರ ಒತ್ತು: ಹೆಚ್‌ಡಿಕೆ

ಮೈಸೂರು: ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಗೆ ನರೇಂದ್ರ ಮೋದಿ ಅವರ ಸರ್ಕಾರ ದುಡಿಯುತ್ತಿದೆ. ಈ ರಾಜ್ಯಗಳ ಶ್ರೇಯೋವೃದ್ಧಿಗೆ ಸುಮಾರು ಐದೂವರೆ ಲಕ್ಷ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ರಾಷ್ಟ್ರೀಯ ಏಕಾತ್ಮಕಾ ಯಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ನಾಗರಿಕ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪೂರ್ವದತ್ತ ನೋಡಿ (Look east) ನೀತಿ ಅಡಿಯಲ್ಲಿ ಮೋದಿ ಅವರು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯ, ಮಣಿಪುರ, ನಾಗಲ್ಯಾಂಡ್, ಸಿಕ್ಕಿಂ , ತ್ರಿಪುರ ಅಭಿವೃದ್ಧಿಗೆ ಕಳೆದ ಎಪ್ಪತ್ತು ವರ್ಷಗಳಲ್ಲಿ ಕಂಡೂ ಕೇಳರಿಯದಷ್ಟು ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಅನುಷ್ಠಾನ ಆಗುತ್ತಿರುವ ಕಾರ್ಯಕ್ರಮಗಳನ್ನು ಅತ್ಯಂತ ಗಮನವಿಟ್ಟು ಪರಿಶೀಲನೆ ಮಾಡಬೇಕು ಎಂದು ಮೋದಿ ಅವರು, ಸಂಪುಟ ಸಚಿವರಿಗೆ ಸೂಚಿಸಿದ್ದಾರೆ. ಅದರಂತೆ ನಾನೂ ಕಳೆದ ವರ್ಷ ನಾಲ್ಕು ದಿನಗಳ ಕಾಲ ನಾಗಲ್ಯಾಂಡ್, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳಿಗೆ ಭೇಟಿ ನೀಡಿ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಕೈಗಾರಿಕೆಗಳ ಪ್ರಗತಿ ಪರಿಶೀಶೀಲನೆ ನಡೆಸುವುದರ ಜತೆಗೆ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳಿಗೆ ದೇವೆಗೌಡರ ಕೊಡುಗೆ ಸ್ಮರಿಸಿದ ಸಚಿವರು:

1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಈಶಾನ್ಯ ಭಾಗದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ₹7,503.51 ಕೋಟಿಗಳಷ್ಟು ಬೃಹತ್ ಪ್ಯಾಕೇಜ್ ಘೋಷಿಸಿದರು. ಕೂಡಲೇ ₹6,100 ಕೋಟಿಯಷ್ಟು ಹಣ ಬಿಡುಗಡೆ ಮಾಡಿದರು. ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಶಖೆ ಶುರುವಾಗಿದ್ದೇ ಆಗ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.

ರಾಷ್ಟ್ರೀಯ ಏಕಾತ್ಮಕಾ ಯಾತ್ರೆ ಅಂಗವಾಗಿ, ಎಬಿವಿಪಿ ಹಮ್ಮಿಕೊಂಡಿದ್ದ ನಾಗರಿಕ ಸ್ವಾಗತ ಕಾರ್ಯಕ್ರಮದ ಬಗ್ಗೆ ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವ ಕುಮಾರಸ್ವಾಮಿ ಅವರು, ಏಕ ಭಾರತ ಪರಿಕಲ್ಪನೆ ಅಡಿಯಲ್ಲಿ ಇಡೀ ದೇಶವನ್ನು ಒಗ್ಗಟ್ಟಾಗಿಡಲು ಇದೊಂದು ಅತ್ಯುತ್ತಮ ಕಾರ್ಯಕ್ರಮ. ಇದಕ್ಕಾಗಿ ನಾನು ಎಬಿವಿಪಿ ಸಂಘಟಕರನ್ನು ಅಭಿನಂದಿಸುತ್ತೇನೆ ಎಂದರು.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಅಂತರ್ಗತ ಮಾಡಿಕೊಂಡಿರುವ ಅನನ್ಯ ರಾಷ್ಟ್ರ. ಈಶಾನ್ಯದಲ್ಲಿಯೇ ಅನೇಕ ಬುಡಕಟ್ಟುಗಳು, ಅನೇಕ ಭಾಷೆಗಳು, ಅನೇಕ ಸಂಸ್ಕೃತಿ, ಆಚಾರ ವಿಚಾರಗಳು ಅಡಗಿವೆ. ಅವರೆಲ್ಲರೂ ಒಬ್ಬರನ್ನು ಒಬ್ಬರು ಗೌರವಿಸಿಕೊಂಡು ಸೌಹಾರ್ದವಾಗಿ ಜೀವನ ನಡೆಸುತ್ತಿದ್ದಾರೆ. ಭಾರತದ ಶ್ರೇಷ್ಠತೆ ಅಡಗಿವುದೇ ಇಲ್ಲಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಈಶಾನ್ಯ ರಾಜ್ಯಗಳು ಭಾರತೀಯ ಉಕ್ಕು ಕ್ಷೇತ್ರದ ಬೆನ್ನೆಲುಬಾಗಿದ್ದು, ಆ ಭಾಗದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಲಾಗುವುದು ಹಾಗೂ ಉಕ್ಕು ಕ್ಷೇತ್ರದ ವಿಸ್ತರಣೆಗೆ ಪ್ರಾಮುಖ್ಯತೆ ಕೊಡಲಾಗುವುದು ಎಂದು ಸಚಿವರು ಹೇಳಿದರು.

ಸಂಸದ ಯದುವೀರ್‌ ಒಡೆಯರ್‌, ಕಾಂಬೋಡಿಯ ದೇಶದ ಕಾನ್ಸುಲ್ ಜನರಲ್ ಆಗಿರುವ ಶ್ರೀ ಕಾರ್ತಿಕ್ ತಲ್ಲಂ, ಎಬಿವಿಪಿ ಅಖಿಲ ಭಾರತ ಉಪಾಧ್ಯಕ್ಷ ಪ್ರೊ. ಮಂದ್ರಾ ಭಾನುಶೇರ್, ಎಬಿವಿಪಿಯ ಮಿಜೋರಂ, ಮೇಘಾಲಯ, ನಾಗಲ್ಯಾಂಡ್ ನ ಸಂಘಟನಾ ಕಾರ್ಯದರ್ಶಿ ಮಂಜುನಾಥ ಮಂಗಳಗಿ, ವಿದ್ಯಾರ್ಥಿಗಳ ಪ್ರವಾಸದ ಉಸ್ತುವಾರಿಯಾಗಿರುವ ಡಾ. ಲಿಖಿತಾ ಗೌಡ, ಜಂಟಿ ಉಸ್ತುವಾರಿ ಆಗಿರುವ ಪ್ರಜ್ವಲ್, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ವಿಶ್ವಪ್ರಸಾದ್ ಆಳ್ವಾ, ಉಪಾಧ್ಯಕ್ಷ ಪ್ರೊ. ಎಂ.ಆರ್.ಗಂಗಾಧರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಆಗಿರುವ ಡಾ. ಚಂದ್ರಶೇಖರ್ ಸೇರಿದಂತೆ ಈಶಾನ್ಯ ಭಾಗದ ಏಳೂ ರಾಜ್ಯಗಳಿಂದ ಆಗಮಿಸಿದ್ದ 216ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ವಿಶೇಷ ಗಮನ ಸೆಳೆದ ಈಶಾನ್ಯ ಸಂಸ್ಕೃತಿ:

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಧರಿಸಿದ್ದ ಧಿರಿಸು, ಉಡುಪುಗಳು ಎಲ್ಲರ ಗಮನ ಸೆಳೆದವು. ಸಚಿವ ಕುಮಾರಸ್ವಾಮಿ ಅವರು, ವಿದ್ಯಾರ್ಥಿಗಳನ್ನು ವಿಚಾರಿಸಿ ಅವರ ವಿದ್ಯಾಭ್ಯಾಸ, ಕರ್ನಾಟಕದ ಕುರಿತ ಅವರ ಭಾವನೆಗಳ ಬಗ್ಗೆ ಸಚಿವರು ಕೇಳಿ ತಿಳಿದುಕೊಂಡರು.

Tags:
error: Content is protected !!