ಮೈಸೂರು: ಸಿಎಂ ಸಿದ್ದರಾಮಯ್ಯ ಒಬ್ಬ ಕೇರ್ ಲೇಸ್ ಪರ್ಸನ್. ಬೇಜವಾಬ್ದಾರಿ ಮನುಷ್ಯ, ಈ ಬೇಜವಾಬ್ದಾರಿಯಿಂದಲೇ ಇಷ್ಟೊಂದು ತೊಂದರೆ ತಂದುಕೊಂಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್‌ನಲ್ಲಿ ಸಿದ್ದರಾಮಯ್ಯ ಇದ್ದಾಗ ಕಾಂಗ್ರೆಸ್ ಬಗ್ಗೆ ಕಟುವಾಗಿ ಟೀಕಿಸುತ್ತಿದ್ದರು. ಬಳಿಕ ಜೆಡಿಎಸ್‌ನಿಂದ ಅವರನ್ನು ಹೊರ ಹಾಕಿದಾಗ ಬೀದಿಪಾಲಾಗಿದ್ದರು. ಆಗ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆ ಕರೆದು ತಂದದ್ದು ನಾವು. ಆದರೆ, ಸಿದ್ದರಾಮಯ್ಯ ಅದೇ ಪಕ್ಷದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ ಮಾತು ಎತ್ತಿದರೆ ನಾನು ಅಕ್ಕಿ ಕೊಟ್ಟೆ ಎನ್ನುತ್ತಾರೆ. ಆದರೆ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಕ್ಕಿ ಬೆಳೆಯುವ ಭೂಮಿಯನ್ನೇ ನೀಡಿದ್ದಾರೆ. ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ನೀಡಿದ ಆಡಳಿತವನ್ನು ಈಗ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಒಂದೂವರೆ ಕೋಟಿ ರೂ. ಬೆಲೆ ಬಾಳುವ ನಿವೇಶನಗಳನ್ನು ಕೇವಲ ಒಂದು ಸಾವಿರ ಅಥವಾ ಎರಡು ಸಾವಿರಕ್ಕೆ ನೀಡಿದ್ದಾರೆ. ಅದರಲ್ಲಿ ಸಿಎಂ ಪತ್ನಿಗೂ ಈ ರೀತಿಯಲ್ಲಿಯೇ ಹಂಚಿಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಬಳಿಕ. ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ಇತ್ತೀಚೆಗೆ ಜನತೆ ಲೋಕಾಯುಕ್ತ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ಮತ್ತು ಇಡಿ ತನಿಖಾ ಸಂಸ್ಥೆಗಳಿಗೆ ಅಧಿಕೃತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.