ಸ್ವಚ್ಚತೆ, ರಸ್ತೆ, ಅಕ್ರಮ-ಸಕ್ರಮ ಮೊದಲಾದ ಸಮಸ್ಯೆಗಳು ಪಾದಯಾತ್ರೆಯಲ್ಲಿ ಸದ್ದು
ಮೈಸೂರು: 10 ಅಡಿಯ ಒಂದೆ ಮನೆಯಲ್ಲಿ 8 ಮಂದಿ ಒತ್ತಡದಲ್ಲಿದ್ದೇವೆ. ನಮಗೊಂಡು ಸೂರಿನ ವ್ಯವಸ್ಥೆ ಮಾಡಿಸಿಕೊಡಿ ಎಂಬಿತ್ಯಾದಿ 25ಕ್ಕೂ ಹೆಚ್ಚಿನ ದೂರುಗಳನ್ನು ಆಲಿಸಿದ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ, ಶೀಘ್ರ ಪರಿಹಾರದ ಭರವಸೆ ನೀಡಿದರು.
ಪ್ರತಿ ಸೋಮವಾರದಂತೆ ಈ ಬಾರಿಯೂ ಕ್ಷೇತ್ರದ ಒಂದು ವಾರ್ಡಿನ ಸಮಸ್ಯೆ ಆಲಿಸಲು ಮಹಾನಗರ ಪಾಲಿಕೆಯ ವಾರ್ಡ್ ನಂ.3 – ಮಹದೇಶ್ವರ ಬಡಾವಣೆಯ ತ್ರಿವೇಣಿ ವೃತ್ತದ ಚಾಮುಂಡೇಶ್ವರಿ ದೇವಾಲಯದಿಂದ ಪಾದಯಾತ್ರೆಯನ್ನು ಪಾಲಿಕೆಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಆರಂಭಿಸಿ, ಮಹದೇಶ್ವರ ಬಡಾವಣೆಯ 1ನೇ ಕ್ರಾಸ್ನಿಂದ 12ನೇ ಕ್ರಾಸಿನ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಜನರ ಸಮಸ್ಯೆ ಆಲಿಸಿದರು. ಈ ವೇಳೆ ಜನರು ಸಹ ಪಾಲಿಕೆ ಅಧಿಕಾರಿಗಳಿಗೆ ತಿಳಿಸುವಂತೆ ಶಾಸಕರ ಬಳಿಕ ಸ್ವಚ್ಚತೆ ಸರಿಪಡಿಸಿ, ಚರಂಡಿ ನೀರು, ವಿದ್ಯುತ್ ಕಂಬ ಬದಲಿಸಿಕೊಡಿ ಎಂಬಿತ್ಯಾದಿ ಸಹಜ ದೂರಗಳನ್ನು ಹೇಳಿಕೊಂಡರು. ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಶಾಸಕರು ದೂರುಗಳನ್ನು ಅಧಿಕಾರಿಗಳ ಮೂಲಕ ದಾಖಲಿಸಿಕೊಂಡು ದೂರದಾರರ ನಂಬರ್ ಸಹ ಪಡೆದು ನಿಮ್ಮ ಸಮಸ್ಯೆ ಬಗೆಹರಿಸಿ ಮತ್ತೆ ಸಂಪರ್ಕಿಸುವ ಭರವಸೆ ನೀಡಿದ್ದು ವಿಶೇಷವಾಗಿತ್ತು.
ಅನೇಕ ಕಡೆ ಮಹಿಳೆಯರು ಆರತಿ ಬೆಳಗಿ ಶಾಸಕರನ್ನು ಹಾರೈಸಿದರು. ಮನೆ ಬಾಗಿಲಿಗೆ ಬಂದ ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಟೀ-ಕಾಫಿ ನೀಡಿ ಸತ್ಕರಿಸಿದರು.
ಪಾದಯಾತ್ರೆ ನಂತರ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ನಡೆಸಿದ ವೇಳೆ ಮಾತನಾಡಿದ ಶಾಸಕ ಕೆ. ಹರೀಶ್ ಗೌಡ, ಈ ಭಾಗದ ಪಾಲಿಕೆ ಸದಸ್ಯರಾಗಿದ್ದ ಶಿವಮಾದು ರವರು ಉತ್ತಮ ಕೆಲಸವನ್ನು ಮಾಡಿದ್ದು, ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಪಾದಯಾತ್ರೆ ವೇಳೆಯಲ್ಲಿ ಚೆಸ್ಕಾಂ ಗೆ ಸಂಬಂಧಿಸಿದಂತೆ ವಿದ್ಯುತ್ ಕಂಬಗಳನ್ನು ಬದಲಿಸುವ ಹಾಗೂ ಸ್ಥಳಾಂತರಿಸುವ ಬಗ್ಗೆ ಬಹಳ ಮನವಿ ಬಂದಿದ್ದು ಎಲ್ಲದಕ್ಕೂ ಸ್ಪಂದಿಸುವ ಕೆಲಸ ಮಾಡಲಾಗುವುದು. ಪ್ರಮುಖವಾಗಿ ಈ ಭಾಗದ ಜನತೆ ಮನೆಗಾಗಿ ಬೇಡಿಕೆಯಿಟ್ಟಿದ್ದು ಅದರ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು. ಇದು ಕಂದಾಯ ಬಡಾವಣೆಯಾಗಿದ್ದು ಅಕ್ರಮ-ಸಕ್ರಮದ ಮುಖಾಂತರ ಖಾತೆ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಸರ್ಕಾರದ ಗಮನಕ್ಕೆ ತರಲು ಮನವಿ ಮಾಡಿದ ಕಾರಣ, ಈ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು ಭಾಗದಲ್ಲಿ ಪಾದಯಾತ್ರೆ ನಡೆಸಿ ಸಮಸ್ಯೆ ಆಲಿಸಿದ್ದು, ಈ ಪಾದಯಾತ್ರೆಗೂ ಚೆಸ್ಕಾಂ, ರೆವಿನ್ಯೂ, ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರ ಜತೆಗೂಡಿ ಮಾಡುತ್ತಿದ್ದೇನೆ. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ಹೆಚ್ಚು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಚೇಗೌಡನ ಕೊಪ್ಪಲಿನ ರವಿ, ವಾರ್ಡಿನ ಮುಖಂಡರಾದ ಶಿವಮಾದು, ಸುರೇಶ್, ಮಹೇಶ್, ರಾಮಪ್ರಸಾದ್ ಸೇರಿ ಅನೇಕ ಮಹಿಳಾ ಕಾಂಗ್ರೆಸ್ ಮುಖಂಡರು ಪಾದಯಾತ್ರೆಯಲ್ಲಿ ಶಾಸಕರ ಬಳಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು