ಮೈಸೂರು: ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡಿದಾಗ ಸುಮ್ಮನೆ ಕೂರಬೇಡಿ. ಗಟ್ಟಿ ಧ್ವನಿಯಿಂದ ಹೇಳಿ ಅವರ ಬಾಯಿ ಮುಚ್ಚಿಸಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಕರೆ ನೀಡಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಎಚ್.ಸಿ.ಮಹದೇವಪ್ಪ ಅವರು, ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ ಎಂಬ ಕೃತಿ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಕೆಲ ವರ್ಷಗಳ ಹಿಂದೆ ತುತ್ತು ಅನ್ನಕಾಗಿ ಜನ ಎಷ್ಟು ಕಷ್ಟ ಪಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತೇ ಇದೆ. ನೊಂದ ಜನರಿಗೆ ಮುಕ್ತಿ ಕೊಡಬೇಕು ಅಂತ ಮೊದಲ ಬಾರಿಗೆ ಸಿಎಂ ಆದ ತಕ್ಷಣದಲ್ಲೇ ಅನ್ನಭಾಗ್ಯ ಘೋಷಣೆ ಮಾಡಿದರು.
ಬಡವರಿಗೆ, ಶೋಷಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡಿ ಹೊಗಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಸಿದ್ದರಾಮಯ್ಯ ಒಬ್ಬ ಅಪರೂಪದ, ಪ್ರಾಮಾಣಿಕ ರಾಜಕಾರಣಿ. ಅವರ ಜೊತೆ ನಾನು 40 ವರ್ಷಗಳಿಂದ ಇದ್ದೇನೆ. ದಿನ ಪೂರ್ತಿ ಸಿಎಂ ಸಿದ್ದರಾಮಯ್ಯ ಅವರು ಸೇವೆಯಲ್ಲೇ ಕಾಲ ಕಳೆಯುತ್ತಾರೆ ಎಂದು ಸಿದ್ದರಾಮಯ್ಯರನ್ನು ಹಾಡಿ ಹೊಗಳಿದರು.