ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ನಿನ್ನೆ ಮೈಸೂರು ನಗರದಾದ್ಯಂತ ದಿಢೀರ್ ಕಾರ್ಯಾಚರಣೆ ನಡೆದಿದ್ದು, ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಅವರೇ ಖುದ್ದು ಫೀಲ್ಡ್‌ಗೆ ಇಳಿದಿದ್ದಾರೆ.
ತಡರಾತ್ರಿ ಮಂಡಿ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಮಿಡ್‌ನೈಟ್ ಕಾರ್ಯಾಚರಣೆ ನಡೆದಿದ್ದು, 26 ಮಂದಿ ಗಾಂಜಾ ಸೇವಿಸಿದವರು ಪತ್ತೆಯಾಗಿದ್ದಾರೆ. ಒಬ್ಬ ಮಾರಾಟಗಾರನನ್ನು ವಶಕ್ಕೆ ಪಡೆಯಲಾಗಿದ್ದು, ಮಂಡಿ, ಮೊಹಲ್ಲಾ, ಉದಯಗಿರಿ, ಎನ್.ಆರ್.ಮೊಹಲ್ಲಾ, ನಜರ್‌ಬಾದ್, ಕೆ.ಆರ್.ಮೊಹಲ್ಲಾ ಸೇರಿದಂತೆ ಹಲವು ಪಡೆ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.
ಡಿಸಿಪಿಗಳು, ಎಸಿಪಿಗಳು ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, 59 ಗೋದಾಮುಗಳನ್ನು ಪರಿಶೀಲನೆ ಮಾಡಲಾಗಿದೆ. ಹಾಸ್ಟೆಲ್‌ಗಳು ಸೇರಿದಂತೆ ಹಲವು ಕಡೆ ತಪಾಸಣೆ ನಡೆಸಲಾಗಿದ್ದು, ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ 35 ಜನರನ್ನು ವಿಚಾರಣೆ ನಡೆಸಿದ್ದಾರೆ. ಇಂದು ಸಹಾ ಕಾರ್ಯಾಚರಣೆ ಮುಂದುವರಿಯಲಿರುವ ಸಾಧ್ಯತೆಯಿದ್ದು, ಗಾಂಜಾ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.





