Mysore
26
few clouds

Social Media

ಶನಿವಾರ, 14 ಫೆಬ್ರವರಿ 2026
Light
Dark

ಮನುಸ್ಮೃತಿ ಪ್ರತಿದಿನವೂ ಸುಡಬೇಕು : ಪ್ರೊ.ಮೀನಾಕ್ಷಿ ಬಾಳಿ

ಮೈಸೂರು : ಮನುಸ್ಮೃತಿಯ 9ನೇ ಅಧ್ಯಾಯವನ್ನು ಓದಿದರೇ ಅದನ್ನು ದಿನ ದಿನವೂ ಸುಡಬೇಕು ಅನಿಸಲಿದೆ. ಅಷ್ಟು ಕೆಟ್ಟದ್ದಾಗಿ ಮಹಿಳೆಯ, ದಲಿತರ, ದುಡಿವವರ ಬಗ್ಗೆ ಕೀಳಾಗಿ ಹೇಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಪ್ರೊ.ಮೀನಾಕ್ಷಿ ಬಾಳಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧನಾ ವಿದ್ಯಾರ್ಥಿ ವೇದಿಕೆ ವತಿಯಿಂದ ಗುರುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ‘ಪ್ರಜಾಪ್ರಭುತ್ವ ಸದೃಢತೆಯಲ್ಲಿ ಮಹಿಳಾ ಸಮುದಾಯದ ಜವಾಬ್ದಾರಿ’ ವಿಷಯ ಮಂಡಿಸಿ ಮಾತನಾಡಿದರು.

ಹೆಣ್ಣನ್ನು ಮಾಯೆ, ಮೈಲಿಗೆ ಎಂದು ಕರೆಯುತ್ತಾರೆ. ಆದರೆ, ಅದೇ 9 ತಿಂಗಳ ಮೈಲಿಗೆ ರಕ್ತದಿಂದಲೇ ಎಲ್ಲರೂ ಹುಟ್ಟುವುದು ಎಂಬುದು ಗೊತ್ತಿಲ್ಲವೇ? ನಿಸರ್ಗ ದಯೇ ಪಾಲಿಸಿರುವ ಹೆಣ್ಣಿನ ಶಕ್ತಿಯನ್ನು ಕೀಳಾಗಿಸಿರುವುದು ಸನಾತನ ಧರ್ಮ. ಹೀಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಹಾಕಿದರು ಎಂದು ಹೇಳಿದರು.

ಇಡೀ ಶೂದ್ರ ಸಮುದಾಯವನ್ನು ನುಂಗುತ್ತಿರುವುದು ಸನಾತನ ಧರ್ಮ. ಅದರ ಅಪಸವ್ಯಗಳು, ಕೆಟ್ಟ ವಿಷಯ ಕುರಿತು ಮಾತನಾಡಿದಾಗಲೆಲ್ಲಾ ನಮ್ಮನ್ನು ಟ್ರೋಲ್ ಮಾಡುವುದೂ ಕೂಡ ಶೂದ್ರರೇ ಆಗಿರುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಮಹಿಳೆಯರಿಗೆ ದಾರ್ಮಿಕ ಸ್ವಾತಂತ್ರ್ಯ ನೀಡಿದೆ. ಆದರೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಜಯಮಾಲ ಹೋಗಿ ಬಂದದ್ದುಕ್ಕೆ ಗೋಮೂತ್ರ ಸಿಂಪಡಿಸಿ ತೊಳೆದರು. ಏಕೆಂದರೆ ಅಯ್ಯಪ್ಪ ಸ್ವಾಮಿ ಗಂಡು ಹೆಣ್ಣಿನ ಸಂಯೋಗದಿಂದ ಹುಟ್ಟಿಲ್ಲ, ಶಿವ ಮತ್ತು ವಿಷ್ಣುವಿನಿಂದ ಹುಟ್ಟಿರುವುದು ಎಂದು ಹೇಳಲಾಗುತ್ತದೆ. ಹೀಗೆ ಹುಟ್ಟಲು ಸಾಧ್ಯವೇ? ಇದನ್ನು ನಾವು ನಂಬಿದ್ದೇವೆ ಎಂದು ಲೇವಡಿ ಮಾಡಿದರು.

ಸನಾತನ ಧರ್ಮದ ಮೌಲ್ಯಗಳ ವಿರುದ್ಧ ವಚನಕಾರರು ನೇರವಾಗಿ ದಾಳಿ ನಡೆಸಿದ್ದಾರೆ. ವೇದಾಗಮನಗಳನ್ನು ಸರಿಯಾಗಿ ಅಳಿದಿದ್ದಾರೆ. ಸಮಾನತೆ, ಲಿಂಗ ಅಸಮಾನತೆಯ ಬಗ್ಗೆ ವಚನಕಾರರು ಮಾತನಾಡಿದರು. ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಎಲ್ಲಿದೆ? ಯಜ್ಞೋಪವೀತ ಧಾರಣೆಗೆ ಅವಕಾಶವಿಲ್ಲ, ವೇದ ಪಠಣಕ್ಕೆ ಅವಕಾಶ ಎಲ್ಲಿದೆ? ಉಪನಿಷತ್ತು ಹೆಣ್ಣು ಮಕ್ಕಳಿಗೆ ಕೊಡುವಂತಿಲ್ಲ. ದಲಿತರಿಗೆ ಕೊಡುವುದಿಲ್ಲ, ಇದೆಲ್ಲವನ್ನೂ ನೋಡಿದರೆ ಹೆಣ್ಣಿಗೆ ಸಿಟ್ಟು ಬರಬೇಕು, ಹೆಣ್ಣನ್ನು ಗುಲಾಮರಾನ್ನಾಗಿ ಮಾಡಿಕೊಂಡಿರುವುದು ಇದೇ ಸನಾತನ ವ್ಯವಸ್ಥೆ ಎಂದು ಅವರು ಕಟುವಾಗಿ ಟೀಕಿಸಿದರು.

ಮಹಿಳೆಯರಿಗೆ ಶೇ. 60ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಕಾನೂನನ್ನು ಬಳಸಿಕೊಂಡಿಲ್ಲ. ಇಂದಿಗೂ ವರದಕ್ಷಿಣೆ ತೆಗೆದುಕೊಳ್ಳದವರು ಇದ್ದಾರೆ? ವರದಕ್ಷಿಣೆ ತೆಗೆದುಕೊಳ್ಳುವವರು ಬೇಡ ಎಂದು ಯುವತಿಯರು ತೀರ್ಮಾನಿಸಲಿ. ಆಗ ಹುಡುಗರು ಎಲ್ಲಿ ಹೋಗುತ್ತಾರೆ. ಮಠದ ಸ್ವಾಮೀಜಿ ಆಗುತ್ತಾರೆಯೇ? ಋಷಿಗಳಾಗುತ್ತಾರೆಯೇ? ತಪಸ್ವಿಯಾಗುತ್ತಾರೆಯೇ? ಈಗ ಸ್ವಾಮಿಗಳೇ ಸರಿಯಾಗಿಲ್ಲ ಎಂದು ಅವರು ಕಿಡಿಕಾರಿದರು.

ಕಾರ್ಯಕ್ರಮ ಉದ್ಘಾಟಿಸಿ ಚಲನಚಿತ್ರ ನಟ ಪ್ರಕಾಶ್ ರಾಜ್ ಮಾತನಾಡಿದರು. ಪ್ರಜಾಪ್ರಭುತ್ವದ ಸದೃಢತೆಯಲ್ಲಿ ಯುವ ಸಮುದಾಯದ ಜವಾಬ್ದಾರಿ ಕುರಿತು ಅಜೀಂ ಪ್ರೇಮ್‌ಜಿ ವಿವಿಯ ಪ್ರಾಧ್ಯಾಪಕ ಎ.ನಾರಾಯಣ ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎನ್.ಕೆ.ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ವಿಜಯಕುಮಾರಿ ಎಸ್.ಕರಿಕಲ್, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಜೈನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಎಸ್.ಡಿ.ಶಶಿಕಲಾ ಹಾಜರಿದ್ದರು.

Tags:
error: Content is protected !!