ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ವಿಜಯನಗರ ಮೂರನೇ ಹಂತದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಅಪಹರಿಸಲಾಗಿದೆ.
ಟಾಟಾ ಸುಮೋ ವಾಹನದಲ್ಲಿ ಬಂದ ಐದಾರು ಮಂದಿ, ಆ ವ್ಯಕ್ತಿ ಕಣ್ಣಿಗೆ ಕಾರದಪುಡಿ ಎರಚಿ, ಮನಸ್ಸೋ ಇಚ್ಛೆ ಥಳಿಸಿ, ಅಪಹರಣ ಮಾಡಿದ್ದಾರೆ.
ಆ ವ್ಯಕ್ತಿ ಜೋರಾಗಿ ಕಿರುಚುತ್ತಾ, ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಿಲ್ಲ. ರಸ್ತೆಯಲ್ಲಿ ನಿಂತಿದ್ದ ಜನರು ವ್ಯಕ್ತಿಯನ್ನು ರಕ್ಷಣೆ ಮಾಡಲು ಧಾವಿಸುವ ಧೈರ್ಯ ಮಾಡಿಲ್ಲ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ವಿಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರಿಂದ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.





