ಮೈಸೂರು: ಬೆಟ್ಟದಪುರ ಮಲ್ಲಿಗೆ ಕೊಲೆ ಪ್ರಕರಣಕ್ಕೆ (Mallige murder case) ಸಂಬಂಧಿಸಿದಂತೆ ಇಂದು ಎಸ್ಪಿ ಅವರು ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ ಎಂದು ಆರೋಪಿ ಸುರೇಶ್ ಪರ ವಕೀಲ ಪಾಂಡು ಪೂಜಾರಿ (Pandu Pujari) ಮಾಹಿತಿ ನೀಡಿದ್ದಾರೆ.
ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಪತಿಯು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವಾಗಲೇ ಆಕೆ ತನ್ನ ಪ್ರಿಯಕರನೊಂದಿಗೆ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುರೇಶ್ ಪರ ವಕೀಲ ಪಾಂಡು ಪೂಜಾರಿ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತಪ್ಪುಗಳು ಸಾಕಷ್ಟು ಕಂಡು ಬಂದಿದೆ.
ಜಾರ್ಜ್‌ಶೀಟ್‌ನಲ್ಲಿ ಪೊಲೀಸರು ಸುಳ್ಳು ಕಥೆ ಕಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಪೊಲೀಸರಿಗೆ ಛೀಮಾರಿ ಹಾಕಿದೆ. ಅಲ್ಲದೆ ಇದೇ ತಿಂಗಳ 23ಕ್ಕೆ ತೀರ್ಪು ಕಾಯ್ದಿರಿಸಿದೆ. ಈ ಪ್ರಕರಣದಲ್ಲಿ ಮೂವರು ತನಿಖಾಧಿಕಾರಿಗಳು ಸೇರಿದಂತೆ 10 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕೋರ್ಟ್ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ಐಪಿಸಿ ಸೆಕ್ಷನ್ 211 ಅಡಿಯಲ್ಲಿ ಪ್ರಕರಣ ದಾಖಲಿಸಿ ಎಂದು ಮನವಿ ಮಾಡಿದ್ದೇನೆ. ನ್ಯಾಯಾಂಗ ತನಿಖೆಗೂ ಕೂಡ ನಾನು ಮನವಿ ಮಾಡುತ್ತೇನೆ ಎಂದು ಪ್ರಕರಣ ಸಂಬಂಧ ಮಾಹಿತಿ ನೀಡಿದರು.





