Mysore
20
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಕೆಡಿಪಿ: ಮಧ್ಯಾಹ್ನದಿಂದ ರಾತ್ರಿವರೆಗೂ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ತವರಿನಲ್ಲಿ ಶುಕ್ರವಾರ(ಸೆ.27) ಮಧ್ಯಾಹ್ನದಿಂದ ರಾತ್ರಿ 9:35ರವರೆಗೂ ಕೆಡಿಪಿ ಸಭೆ ನಡೆಸಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

ನಾನು ಮೈಸೂರಿಗೆ ಬಂದಾಗಲೆಲ್ಲಾ ಜನ ಸಣ್ಣ ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರ್ತಾರೆ. ಇದರ ಅರ್ಥ ಏನು? ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಆ ಜನ ನನ್ನ ಬಳಿಗೆ ನೂರಾರು ಸಂಖ್ಯೆಯಲ್ಲಿ ಏಕೆ ಬರುತ್ತಿದ್ದರು ಎಂದು ಸಿಎಂ ಖಾರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಧಿಕಾರಿಗಳು ಸಮರ್ಪಕವಾಗಿ ಸಮಸ್ಯೆಗಳನ್ನು ಅಟೆಂಡ್ ಮಾಡಿದ್ದರೆ ಜನರೇಕೆ ನನ್ನ ಬಳಿಗೆ ಬರುತ್ತಿದ್ದರು ಎಂದು ಸಿಎಂ ಮರು ಪ್ರಶ್ನಿಸಿದರು.

ಅಧಿಕಾರಿಗಳು ಆಸ್ಪತ್ರೆ, ಹಾಸ್ಟೆಲ್, ಬಾರ್ ಗಳು ಇನ್ನಿತರೆ ಸ್ಥಳಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸುವುದನ್ನು ನಿಲ್ಲಿಸಿಬಿಟ್ಟಿದ್ದೀರಿ. ಹೀಗಾಗಿ ಭಯ ಇಲ್ಲವಾಗಿದೆ. ದಿಡೀರ್ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು, ನಿಯಮ ಬಾಹಿರ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕು ಎಂದು ಸೂಚಿಸಿದರು.

ನನ್ನ ಜಿಲ್ಲೆ ಮಾದರಿಯಾಗಿರಬೇಕು
ಮೈಸೂರು ನನ್ನ ಜಿಲ್ಲೆ. ಈ ಜಿಲ್ಲೆ ಮಾದರಿಯಾಗಿ ಇರಬೇಕು. ಉಳಿದ ಜಿಲ್ಲೆಗಳಿಗೆ ಮಾದರಿ ಆಗಬೇಕು. ಈ ಜವಾಬ್ದಾರಿನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ತೆಗೆದುಕೊಳ್ಳಬೇಕು. ತುಂಬ ವರ್ಷಗಳಿಂದ ಬಾಕಿ ಇರುವ ಫೈಲ್ಗಳನ್ನು ಪರಿಶೀಲಿಸಬೇಕು, ಏಕೆ ಕ್ಲಿಯರ್ ಮಾಡುತ್ತಿಲ್ಲ? ಐದು, ನಾಲ್ಕು, ಮೂರು ವರ್ಷಗಳಿಂದ ಫೈಲ್ಗಳು ಏಕೆ ಬಾಕಿ ಉಳಿದಿವೆ. ನೀವೇಕೆ ಇತ್ಯರ್ಥ ಮಾಡುತ್ತಿಲ್ಲ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದರು.

ವಿಭಾಗೀಯ ಅಧಿಕಾರಿಗಳು ಚುರುಕಾಗಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳೂ ಅಲರ್ಟ್ ಆಗಿರುತ್ತಾರೆ. ಕಚೇರಿ ಬಾಗಿಲಿಗೆ ರೈತರನ್ನು ಲಘುವಾಗಿ ನೋಡುವುದನ್ನು ನಾನು ಸಹಿಸಲ್ಲ. ಬಹಳ ಮಂದಿ ಅಧಿಕಾರಿಗಳು ಕಚೇರಿಯಲ್ಲೇ ಇರುವುದಿಲ್ಲ ಎನ್ನುವ ದೂರುಗಳು ಬರುತ್ತಿವೆ. ಪಿಡಿಒ ಗಳು ತಾಲ್ಲೂಕು ಕೇಂದ್ರದಲ್ಲೂ ಇರುವುದಿಲ್ಲ ಎನ್ನುವ ದೂರುಗಳು ನನಗೆ ಬರುತ್ತಿವೆ. ವೈದ್ಯರು ಕರ್ತವ್ಯದ ಸ್ಥಳದಲ್ಲಿ ನೆಲೆಸುತ್ತಿಲ್ಲ. ದೂರದ ಊರಿಂದ ಓಡಾಡುತ್ತಿದ್ದಾರೆ. ಇದನ್ನು ಸಹಿಸಬೇಕಾ ಎಂದು ಪ್ರಶ್ನಿಸಿದರು.

ನಿಮ್ಮ ಹೊಣೆಗಾರಿಕೆಗಳನ್ನು ನೀವು ಸೂಕ್ತವಾಗಿ ನಿರ್ವಹಿಸಿದರೆ, ಆ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟವೇನಲ್ಲ. ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ. ಜನರ ಸಮಸ್ಯೆಗಳನ್ನು ಪರಿಹರಿಸಿ ಎಂದರು.

ನಿಮ್ಮ ಹಂತದಲ್ಲೇ ಬಗೆಹರಿಯುವ ಸಮಸ್ಯೆಗಳನ್ನು ಉದಾಸೀನ ಮಾಡದೆ ಬಗೆಹರಿಸಿ. ಜನ ನನ್ನ ಬಳಿಗೆ ಬರುತ್ತಿದ್ದಾರೆ ಎಂದರೆ ನಿಮ್ಮ ಹಂತದಲ್ಲಿ ಕೆಲಸಗಳು ಆಗುತ್ತಿಲ್ಲ ಅಂತಲೇ ಅರ್ಥ. ನೀವುಗಳು ಜನಗಳ ಪರವಾಗಿ ಇಲ್ಲ ಎನ್ನುವ ಅರ್ಥ ಬರುತ್ತದೆ. ನಿಮ್ಮ ನಿಮ್ಮ ಕೆಲಸವನ್ನು ಗಂಭೀರವಾಗಿ ಪರಿಗಣಿಸಿ ನಿರ್ವಹಿಸಿ ಎಂದು ತಾಕೀತು ಮಾಡಿದರು.

 

Tags: