ಮೈಸೂರು: ವೃತ್ತಿ ಜೀವನದ ಕೆಲಸಗಳ ನಡುವೆ ಕ್ರಿಕೆಟ್ ಆಡುವುದಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಇಂತಹ ಟೂರ್ನಿಗಳ ಆಯೋಜನೆಗಳಿಂದ ಮತ್ತೆ ಅವಕಾಶ ಸಿಗುತ್ತಿದೆ ಎಂದು ಸ್ಯಾಂಡಲ್‌ವುಡ್ ನಟ, ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದವರು ಎಲ್ಲರೂ ಒಂದೆಡೆ ಸೇರುವುದು ಬಹಳ ಅಪರೂಪ. ಅವಾರ್ಡ್ ಫಂಕ್ಷನ್‌ಗಳಲ್ಲಿ ಮಾತ್ರ ಒಂದೆಡೆ ಸೇರಲು ಸಾಧ್ಯ ಅದು ಕೂಡ ವರ್ಷಕ್ಕೊಂದು ಬಾರಿ ಮಾತ್ರ. ಇಂತಹ ಟೂರ್ನಿಗಳಿಂದ ಎಲ್ಲರೂ ಒಂದೆಡೆ ಸೇರಲು ಅವಕಾಶ ಸಿಗುತ್ತದೆ ಎಂದರು.
ಕೆಸಿಎಲ್ ನಂತಹ ಕ್ರಿಕೆಟ್ ಟೂರ್ನಿಗಳು ಚಿತ್ರರಂಗದ ಒತ್ತಡದ ಜೀವನದಲ್ಲಿ ಒಂದು ರೀತಿ ರಿಲೀಫ್ ಇದ್ದಂತೆ. ಚಿಕ್ಕಂದಿನಿಂದಲೂ ಕ್ರಿಕೆಟ್ ಬಗ್ಗೆ ವಿಶೇಷ ಒಲವಿತ್ತು ಎಂದು ತಿಳಿಸಿದರು.
ಸಿಸಿಎಲ್‌ನಲ್ಲಿ ನಾನೊಬ್ಬ ಆಟಗಾರನಾಗಿದ್ದೆ. ಕೆಸಿಎಲ್‌ನಲ್ಲಿ ಐಕಾನ್ ಪ್ಲೇಯರ್ ಆಗಿದ್ದು, ಸಿಸಿಎಲ್‌ಗಿಂತ ಸ್ವಲ್ಪ ಜವಬ್ದಾರಿ ಹೆಚ್ಚಾಗಿದೆ ಎಂದು ತರುಣ್ ಸುಧೀರ್ ಹೇಳಿದರು.