ಮೈಸೂರು: ಆಕಾಶ, ಭೂಮಿ ಒಂದಾದರೂ ಸರಿ ಮಾರ್ಚ್.22ರಂದು ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್ ಅನ್ನು ಮಾಡೇ ಮಾಡಲಾಗುತ್ತದೆ ಎಂದು ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬೆಳಗಾವಿ ಗಡಿಯಲ್ಲಿ ಎಂಇಎಸ್ ಕಾರ್ಯಕರ್ತರ ದೌರ್ಜನ್ಯ ಖಂಡಿಸಿ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ನಾಡು, ಕನ್ನಡ ಹಾಗೂ ಕನ್ನಡಿಗರ ಶಕ್ತಿಯು ಅಖಂಡ ಕರ್ನಾಟಕವನ್ನು ಬಂದ್ ಮಾಡುವ ಮೂಲಕ ಪ್ರದರ್ಶನವಾಗಬೇಕು. ಕನ್ನಡಿಗರ ಶಕ್ತಿ ದೇಶಕ್ಕೆ ಗೊತ್ತಾಗಬೇಕು ಎಂದರೆ ಮಾ.22ರಂದು ಕರ್ನಾಟಕ ಸಂಪೂರ್ಣ ಬಂದ್ ಆಗಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳು ಅಭಿವೃದ್ಧಿಯಾಗಬೇಕಾಗಿದೆ. ಕೇಂದ್ರ ಸರ್ಕಾರವು ರಾಜ್ಯವನ್ನು ಕಡೆಗಣಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಂದೆಂದೂ ಕಂಡಿರದ ಬಂದ್ ಆಗಬೇಕು. ಈಗಾಗಲೇ ೧೯೦೦ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಈ ಬಂದ್ ಕನ್ನಡಿಗರಿಗಾಗಿ ನಡೆಯುತ್ತಿರುವ ಬಂದ್ ಎಂದರು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕೂಡ ಕೊನೆ ಕ್ಷಣದಲ್ಲಿ ಬೆಂಬಲ ಸೂಚಿಸುತ್ತಾರೆ. ನಾರಾಯಣಗೌಡರ ಬಗ್ಗೆ ನಮಗೆ ಗೌರವ ಇದೆ. ಅವರ ಜೊತೆಯೂ ಕೂಡ ಮಾತನಾಡುತ್ತೇವೆ. ಬಂದ್‌ಗೆ ಯಾರು ಕೂಡ ವಿರೋಧ ಮಾಡುವುದಿಲ್ಲ ಎಂದು ವಾಟಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಕೆಲವರು ಬಂದ್ ಬಗ್ಗೆ ವ್ಯತಿರಿಕ್ತವಾಗಿ ಮಾತನಾಡುತ್ತಾರೆ. ಅವರು ಅವಿವೇಕಿಗಳು. ಕನ್ನಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಭಾವನೆ ಇರಬೇಕು. ವಿದ್ಯಾರ್ಥಿಗಳು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಬೇಕು ಎಂದರು.
ಎಂಇಎಸ್ ದೌರ್ಜನ್ಯ ಖಂಡಿಸಿ ಹಾಗೂ ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ಬೆಂಗಳೂರಿನಲ್ಲಿ ರಾಜಭವನ ಮುತ್ತಿಗೆ ಹಾಕುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.





