ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ತನ್ನ ತಂದೆಯನ್ನು ಹೋಲಿಸಿ ಮಾತನಾಡಿರುವ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ನಾಲ್ವಡಿರವರ ಇತಿಹಾಸ ತಿಳಿಯದ ಯತೀಂದ್ರ ಸಿದ್ದರಾಮಯ್ಯ ಮಾತು ಕೇಳಿದರೆ ನಗು ಬರುತ್ತದೆ. ನಾಲ್ವಡಿ ಅವರಿಗಿಂತ ನಮ್ಮಪ್ಪನದೇ ಜಾಸ್ತಿ ಕೊಡುಗೆ ಮೈಸೂರಿಗೆ ಎಂದು ಹೇಳಿದ್ದಾರೆ. ಅವರಿಗೆ ಬಹುಶಃ ನಾಲ್ವಡಿರವರು ನಮ್ಮ ರಾಜ್ಯಕ್ಕೆ ನೀಡಿರುವ ನೂರಾರು ಕೊಡುಗೆಗಳು ತಿಳಿದಿಲ್ಲ. ಶಿಕ್ಷಣ, ನೀರಾವರಿ, ಕೈಗಾರಿಕೆ, ಕಾರ್ಖಾನೆಗಳು, ಪ್ರಜೆಗಳಿಗೆ ಸಾಮಾಜಿಕ ನ್ಯಾಯ ನೀಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಾಲ್ವಡಿರವರು ರಾಜ್ಯಕ್ಕೆ ನೀಡದ ಕೊಡುಗೆಗಳಿಲ್ಲ.
ನೂರಾರು ಜನ್ಮ ಎತ್ತಿದರೂ, ಯಾರೂ ನಾಲ್ವಡಿರವರ ಕಾಲಿನ ಧೂಳಿಗೂ ಸಮನಾಗಲ್ಲ. ಸಿದ್ದರಾಮಯ್ಯ ರಾಜಕೀಯದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು, ಪಕ್ಷಗಳನ್ನು ಬದಲಾವಣೆ ಮಾಡಿ, ರಾಜ್ಯದ ಜನರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ನಡೆಸಿ, ಜನರ ಹಣದಲ್ಲಿ ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆಯೇ ಹೊರತು ಅವರ ಮನೆಯಿಂದ ಹಣವನ್ನು ತಂದು ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿಲ್ಲ. ಮಹಾರಾಜರು ಕಟ್ಟಿಸಿದ ಮೈಸೂರು ಮೆಡಿಕಲ್ ಕಾಲೇಜು, ಕೆ.ಆರ್.ಆಸ್ಪತ್ರೆಗೆ ಸುಣ್ಣ ಬಣ್ಣವನ್ನು ಹೊಡಿಸಲು ಆಗಿಲ್ಲ.
ಕೇವಲ ತಮ್ಮ ರಾಜಕೀಯ ಪ್ರಚಾರಕ್ಕಾಗಿ, ಮನಬಂದಂತೆ ಹುಚ್ಚು ಹೇಳಿಕೆ ನೀಡುತ್ತಿರುವ ಯತೀಂದ್ರ ಸಿದ್ರಾಮಯ್ಯ ಈ ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿದರು.





