ಮೈಸೂರು: ಚಿತ್ರಕಲೆ ಪ್ರೋತ್ಸಾಹಿಸಲು ರಾಜ್ಯದೆಲ್ಲೆಡೆ 600 ಕಲಾವೃತ್ತ ಕೇಂದ್ರಗಳನ್ನು ಆರಂಭ ಮಾಡಲಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶೀಘ್ರದಲ್ಲೇ ಮೊದಲ ಕೇಂದ್ರ ಉದ್ಘಾಟನೆಗೊಳ್ಳಲಿದೆ.
ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆಯಲ್ಲಿ ಆಸಕ್ತಿ ಮೂಡಿಸಲು ಕರ್ನಾಟಕ ರಾಜ್ಯ ಲಲಿತ ಕಲೆ ಅಕಾಡೆಮಿ ಮುಂದಾಗಿದ್ದು, ರಾಜ್ಯದೆಲ್ಲೆಡೆ 600 ಕಲಾವೃತ್ತಗಳನ್ನು ಸ್ಥಾಪಿಸಲು ನಿರ್ಧಾರ ಮಾಡಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಸರಾಸರಿ 20 ಕೇಂದ್ರಗಳ ಸ್ಥಾಪನೆಯೊಂದಿಗೆ ರಾಜ್ಯದಲ್ಲಿ 600 ಕಲಾವೃತ್ತ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಶಾಲಾ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಅಭಿರುಚಿಯನ್ನು ಬೆಳೆಸಲು ಅಕಾಡೆಮಿ ಯೋಜನೆ ರೂಪಿಸಿದೆ.
ಪ್ರಾಯೋಗಿಕವಾಗಿ ಈ ಕಲಾವೃತ್ತ ಯೋಜನೆ ಸೇರಿದಂತೆ ಬೆಂಗಳೂರು, ಮಂಗಳೂರು, ಹಾಸನ ಹಾಗೂ ತುಮಕೂರಿನಲ್ಲಿ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಹಂತ ಹಂತವಾಗಿ ರಾಜ್ಯದೆಲ್ಲೆಡೆ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವಿದೆ.
ಕಲೆಯ ಪ್ರಕಾರಗಳಾದ ಸಂಗೀತ, ನೃತ್ಯ, ಸಾಹಿತ್ಯ ತನ್ನದೇ ಆದ ವ್ಯಾಪ್ತಿಯಲ್ಲಿ ಜನ ಸಾಮಾನ್ಯರದಲ್ಲಿ ಹಾಸು ಹೊಕ್ಕಾಗಿದೆ. ಆದರೆ, ಚಿತ್ರಕಲೆಯು ದೊಡ್ಡ ಮಟ್ಟದಲ್ಲಿ ಜನ ಸಾಮಾನ್ಯರೊಂದಿಗೆ ಹೆಚ್ಚು ಸಂಪರ್ಕವಿಲ್ಲದಂತಾಗಿದೆ.
ಈ ಚಿತ್ರಕಲೆಯ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಇಲ್ಲದಿರುವುದರಿಂದ ಸೂಕ್ತ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿದ್ದು, ಪ್ರತಿ ಜಿಲ್ಲೆಗಳಲ್ಲೂ ಕೇಂದ್ರಗಳನ್ನು ಸ್ಥಾಪನೆ ಮಾಡುವ ಗುರಿ ಹೊಂದಲಾಗಿದೆ.
ಈ ಮೂಲಕ ಚಿತ್ರಕಲೆಯಲ್ಲಿ ಆಸಕ್ತಿ ಇರುವವರಿಗೆ ಒಂದು ವೇದಿಕೆಯೇ ಸೃಷ್ಟಿಯಾದಂತಾಗಿದೆ.