ಮೈಸೂರು: ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂಬ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆಯನ್ನು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣೆ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಮಹದೇವಪ್ಪ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ. ಮಹದೇವಪ್ಪ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ.
ಅಣೆಕಟ್ಟು ಕಟ್ಟಿದ್ದು ಮಹಾರಾಜರು. ಆದರೆ, ಅದಕ್ಕೆ ಮೊದಲು ಅದೇ ಜಾಗದಲ್ಲಿ ಬ್ಯಾರೇಜ್ ಕಟ್ಟಿದ್ದು ಟಿಪ್ಪು ಸುಲ್ತಾನ್. ಮೋವಿ ಡ್ಯಾಂ ಎಂದು ಹೆಸರಿಟ್ಟು 6 ಟಿಎಂಸಿ ನೀರು ಸಂಗ್ರಹಣದ ಬ್ಯಾರೇಜ್ ಅನ್ನು ಟಿಪ್ಪು ಕಟ್ಟಿದ್ದರು. ಶ್ರೀರಂಗಪಟ್ಟಣ, ಕೆ.ಆರ್.ನಗರ ಭಾಗಕ್ಕೆ ಇದರಿಂದ ನೀರು ಹರಿಸುತ್ತಿದ್ದರು. ನಂತರ ಇದೇ ಜಾಗದಲ್ಲೇ ಕೆಆರ್‌ಎಸ್ ಅಣೆಕಟ್ಟು ಕಟ್ಟಲಾಗಿದೆ. ಇದಕ್ಕೆ ಶಾಸನದ ಸಾಕ್ಷಿ ಕೂಡ ಇದೆ. ನಾಲ್ವಡಿಗೂ ಹಾಗೂ ಹಾಲಿ ಸಂಸದರಿಗೆ ಹೋಲಿಕೆ ಬೇಡ. ಇವರು ರಾಜಕಾರಣಕ್ಕಾಗಿ ಬಂದವರು ಎಂದು ಸಂಸದ ಯದುವೀರ್ ಒಡೆಯರ್‌ಗೆ ಟಾಂಗ್ ಕೊಟ್ಟರು.
ಇನ್ನು ನಾಲ್ವಡಿಗಿಂತ ನಮ್ಮ ತಂದೆ ಹೆಚ್ಚು ಕೆಲಸ ಮಾಡಿದ್ದಾರೆ ಎಂಬ ಸಿಎಂ ಪುತ್ರ ಹಾಗೂ ಎಂಎಲ್‌ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನೂ ಸಮರ್ಥಿಸಿಕೊಂಡ ಅವರು, ಸಿದ್ದರಾಮಯ್ಯ ಮೈಸೂರಿಗೆ ನೀರು ಕೊಟ್ಟಿದ್ದಾರೆ, ಆಸ್ಪತ್ರೆ ಕಟ್ಟಿಸಿದ್ದಾರೆ, ರಸ್ತೆ ಮಾಡಿಸಿದ್ದಾರೆ. ರಾಜ ಪ್ರಭುತ್ವದಲ್ಲಿ ನಾಲ್ವಡಿ ಅವರು ಕೆಲಸ ಮಾಡಿದರು. ಪ್ರಜಾಪ್ರಭುತ್ವದಲ್ಲಿ ಸಿದ್ದರಾಮಯ್ಯ ಮೈಸೂರಿಗೆ ಅತೀಹೆಚ್ಚು ಕೆಲಸ ಮಾಡಿದ್ದಾರೆ. ಯತೀಂದ್ರ ಹೇಳಿಕೆಯಲ್ಲಿ ಯಾವ ತಪ್ಪು ಇಲ್ಲ ಎಂದರು.
ಇನ್ನು ಸಂಸತ್‌ನಲ್ಲಿ ನಡೆದ ಸ್ಮೋಕ್ ಬಾಂಬ್ ಘಟನೆಯಲ್ಲಿ ಪೊಲೀಸರು ಪ್ರತಾಪ್ ಸಿಂಹ ಮೊಬೈಲ್ ಜಪ್ತಿ ಮಾಡಿದ್ದರು. ಆ ಮೊಬೈಲ್ ಬಗ್ಗೆ ಎಸ್ಐಟಿಗೆ ತನಿಖೆ ನಡೆಸಲು ಕೊಟ್ಟರೆ ಪ್ರಜ್ವಲ್ ರೇವಣ್ಣ ಒಳಗೆ ಹೋದಂತೆ ಪ್ರತಾಪ್ ಸಿಂಹ ಕೂಡ ಒಳಗೆ ಹೋಗುತ್ತಾರೆ. ನನ್ನ ಬಳಿಯೂ ಈ ಬಗ್ಗೆ ಆಧಾರಗಳಿವೆ. ಅವರ ಮೊಬೈಲ್‌ನಲ್ಲಿ ನಗ್ನ ಚಿತ್ರಗಳು, ನಗ್ನ ವಿಡಿಯೋ ಇವೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಗಂಭೀರ ಆರೋಪ ಮಾಡಿದರು.





