ಮೈಸೂರು: ಇರಾನ್-ಇಸ್ರೇಲ್ ಸಂಘರ್ಷದ ಬಗ್ಗೆ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ಮೈಸೂರಿನವರು ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೇರಿಕಾ ಜಂಟಿ ದಾಳಿ ನಡೆಸುತ್ತಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ ಅವರು, ಘಟನೆಯಲ್ಲಿ ಮೈಸೂರಿನವರು ಸಿಲುಕಿರುವ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರ ಕನ್ನಡಿಗರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುತ್ತಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಮಾತನಾಡಿ ಕ್ರಮವಹಿಸಿದ್ದಾರೆ. ಈ ಘಟನೆಯಲ್ಲಿ ಮೈಸೂರಿನವರು ಇರುವ ಮಾಹಿತಿ ಇಲ್ಲಿಯವರೆಗೂ ಸಿಕ್ಕಿಲ್ಲ ಎಂದು ಹೇಳಿದರು.
ಇನ್ನು ಅಧಿಕಾರ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸೈಲೆಂಟ್ ಆದ ಅವರು, ನಾನು ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಮಾತನಾಡುವುದಿಲ್ಲ. ಯಾರು ನನ್ನ ಬಗ್ಗೆ ಏನೇ ಹೇಳಿಕೆ ನೀಡಿದರು ಅದರ ಬಗ್ಗೆ ಉತ್ತರ ಕೊಡುವುದಿಲ್ಲ. ಪಕ್ಷದ ವಿಚಾರವನ್ನ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆ ವಿಚಾರಗಳು ನನಗೆ ಗೊತ್ತಿಲ್ಲ ಎಂದು ಹೇಳಿದರು.
ಇನ್ನು ಒಳ ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಳ ಮೀಸಲಾತಿ ವಿಚಾರವು ಕಾನೂನು ಮುಖಾಂತರವೇ ಎಲ್ಲವು ಸಾಗುತ್ತಿದೆ. ಕೆಲವರು ಪರ- ವಿರೋಧದ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು ಮಾತನಾಡುತ್ತಾರೋ ಮಾತನಾಡಲಿ ಬಿಡಿ. ಇದು ಪ್ರಜಾಪ್ರಭುತ್ವ, ಎಲ್ಲರಿಗೂ ಮಾತನಾಡುವ ಅವಕಾಶವಿದೆ. ಆದರೆ ಎಲ್ಲವು ಸಂವಿಧಾನದ ಅಡಿಯಲ್ಲಿ ನಡೆಯುತ್ತಿದೆ. ಇದರಲ್ಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚೆಯಾದದ್ದನ್ನು ಬಹಿರಂಗಪಡಿಸಬೇಕು ಎಂಬುದೇನೂ ಇಲ್ಲ ಎಂದು ಹೇಳಿದರು.





