Mysore
20
clear sky

Social Media

ಶುಕ್ರವಾರ, 23 ಜನವರಿ 2026
Light
Dark

ಸೌಹರ್ದಯುತ, ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸೂಚನೆ

ಮೈಸೂರು : ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ, ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ ಪಿ.ಶಿವರಾಜು ಹೇಳಿದರು. ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗಣೇಶ ಹಬ್ಬದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡುವುದರಿಂದ ಪರಿಸರಕ್ಕೆ ಮಾರಕವಾಗುವುದನ್ನು ತಪ್ಪಿಸಬಹುದು. ಪಿ.ಒ.ಪಿ ಯಿಂದ ನಿರ್ಮಿಸಿರುವ ಹಾಗೂ ಬಣ್ಣಲೇಪಿತ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ವಿಷಕಾರಿ ರಾಸಾಯನಿಕಗಳು ಜಲಮೂಲಗಳಾದ ಕೆರೆ, ಬಾವಿ, ಹಳ್ಳ ಸೇರಿ ನೀರು ಕಲುಷಿತಗೊಳ್ಳುತ್ತದೆ. ಇದು ಜಲಚರಗಳಿಗೆ ಹಾಗೂ ಮಾನವನಿಗೆ ಅತ್ಯಂತ ಹಾನಿಕರ ಎಂದು ಹೇಳಿದರು.

ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಸ್ಥಳೀಯ ಸಂಸ್ಥೆಗಳು ಕೆರೆ, ನದಿಪಾತ್ರಗಳಲ್ಲಿ ಸ್ಥಳಗಳನ್ನು ನಿಗದಿಪಡಿಸಬೇಕು. ಪೂಜೆಗೆ ಬಳಸಿದ ಹೂವು ಸೇರಿದಂತೆ ಮತ್ತಿತರ ತ್ಯಾಜ್ಯಗಳ ಶೇಖರಣೆಗೆ ಸಂಗ್ರಹಣಾ ಘಟಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕವಾಗಿ ಇಡಲಾಗುವ ಗೌರಿ ಹಾಗೂ ಗಣೇಶ ವಿಗ್ರಹಗಳನ್ನು ಪ್ರತಿ ಸಮಿತಿಯವರು ಕಡ್ಡಾಯವಾಗಿ ಮಹಾನಗರ ಪಾಲಿಕೆ/ನಗರ ಸಭೆ/ಪುರಸಭೆ/ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದ ನಂತರವೇ ಸ್ಥಾಪಿಸಬೇಕು. ಅನುಮತಿ ನೀಡುವ ಪತ್ರಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ತೋರಣ, ಪ್ಲಾಸ್ಟಿಕ್ ಪ್ಲೆಕ್ಸ್, ಮುಂತಾದ ವಸ್ತುಗಳನ್ನು ಬಳಸದಂತೆ ಷರತ್ತು ವಿಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಫೆಂಡಲ್ ಸಮಿತಿಯವರು ರಾತ್ರಿ 10 ರಿಂದ ಬೆಳಿಗ್ಗೆ 6 ರ ತನಕ ಧ್ವನಿವರ್ಧಕಗಳ ಬಳಕೆ ಮಾಡುವುದನ್ನು ನಿಷೇಧಿಸಿದ್ದು, ಪಾರಂಪರಿಕ ಗೌರಿ-ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹಗಳನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಮತ್ತು ಸರ್ಕಾರಿ/ಖಾಸಗಿ ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸುವ ಗೌರಿ-ಗಣೇಶ ಮೂರ್ತಿಗಳನ್ನು ಅತೀ ಸಮೀಪವಾಗುವಂತಹ ಮಾರ್ಗಗಳನ್ನು ಬಳಸಿಕೊಂಡು ಮೈಸೂರು ಮಹಾನಗರ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೊರಕಿಸಿಕೊಡಲಾಗುವ ಸ್ಥಳೀಯ ವತಿಯಿಂದ ಹೊಂಡ ಅಥವಾ ಸಂಚಾರಿ ವಿಸರ್ಜನಾ ವ್ಯವಸ್ಥೆ (Mobile Immersion Tank) ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು ಎಂದು ತಿಳಿಸಿದರು.

ನೈಸರ್ಗಿಕ/ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಪೂಜಾ ಸಾಮಗ್ರಿಗಳಿಂದ ಉತ್ಪತ್ತಿಯಾಗುವ ಹಸಿಕಸವನ್ನು (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಸ್ಥಳೀಯ ಸಂಸ್ಥೆ ಕಸವಿಲೇವಾರಿ ವ್ಯವಸ್ಥೆಗೆ ನೀಡುವಂತೆ ಹಾಗೂ ನಿರ್ಧಿಷ್ಟ ಪ್ರದೇಶದಲ್ಲಿ ಸ್ಥಾಪಿಸಲಾಗುವ ಸಾರ್ವಜನಿಕ ಗೌರಿ ಹಾಗೂ ಗಣೇಶ ಮೂರ್ತಿಯ ವಿಗ್ರಹಗಳನ್ನು ವಿಲೇವಾರಿ ಮಾಡಲು ನಿರ್ಧಿಷ್ಟ ಜಲ ಮೂಲಗಳನ್ನು ನಿಗದಿಪಡಿಸಲಾಗುವುದು ಎಂದರು.

ನಿಯಮಗಳನ್ನು ಉಲ್ಲಂಘಿಸಿ ಪ್ಲಾಸ್ಟರ್ ಆಫ್ ಪ್ಯಾರಿಸ್ /ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಮೂರ್ತಿಗಳನ್ನು ಸಾಗಾಣಿಕೆ, ಮಾರಾಟ, ಪ್ರತಿಷ್ಠಾಪನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ (ಮೈಸೂರು ನಗರ) ಕುಮಾರ್, ಪರಿಸರ ಅಧಿಕಾರಿ (ಮೈಸೂರು ಗ್ರಾಮಾಂತರ) ವಿ.ಸುನೀಲ್ , ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!