ಮೈಸೂರು: ತೆರಿಗೆ ವಿಚಾರದಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ಅನ್ಯಾಯದ ಬಗ್ಗೆ ಬಿಜೆಪಿ ನಾಯಕರು ಯಾರೂ ಕೂಡ ದನಿ ಎತ್ತುತ್ತಿಲ್ಲ. ಈ ಮೂಲಕ ರಾಜ್ಯದ ಜನರಿಗೆ ಬಿಜೆಪಿ ನಾಯಕರಿಂದ ತೀವ್ರ ದ್ರೋಹವಾಗುತ್ತಿದೆ. ಕರ್ನಾಟಕದ ಎಂಪಿಗಳು ರಾಜ್ಯದ ಬಗ್ಗೆ ಕೇಂದ್ರ ಸರ್ಕಾರದ ಬಳಿ ಏನನ್ನೂ ಮಾತನಾಡುತ್ತಿಲ್ಲ. ಇದರಿಂದ ನಮ್ಮ ರಾಜ್ಯಕ್ಕೆ ಸುಮಾರು 60 ಸಾವಿರ ಕೋಟಿ ನಷ್ಟವಾಗಿದೆ ಎಂದು ಆರೋಪಿಸಿದರು.
ಇನ್ನು ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವಿದ್ದಾಗ ಆರ್‌ಎಸ್‌ಎಸ್ ಕೇಸ್‌ಗಳನ್ನು ವಾಪಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ನಾವು ಕೂಡ ಹುಬ್ಬಳ್ಳಿ ಕೇಸ್ ವಾಪಸ್ ಪಡೆಯುತ್ತೇವೆ. ಸರ್ಕಾರದಲ್ಲಿ ಸಂಪುಟ ಸಭೆಯ ಉಪಸಮಿತಿ ರಚನೆಯಾಗಿದ್ದು, ಅದರ ಅಧ್ಯಕ್ಷರಾಗಿ ಗೃಹ ಸಚಿವರಿದ್ದಾರೆ. ಹುಬ್ಬಳ್ಳಿ ಕೇಸ್ ವಾಪಸ್‌ಗೆ ಸಂಪುಟ ಸಭೆ ಒಪ್ಪಿಗೆ ಸಿಕ್ಕಿದೆ. ಕೇಸ್ ವಾಪಸ್‌ಗೆ ಕೋರ್ಟ್ ಕೂಡ ಒಪ್ಪಿಗೆ ನೀಡಬೇಕು. ಆಗ ಮಾತ್ರ ಕೇಸ್ ವಿಥ್ ಡ್ರಾ ಆಗಲಿದೆ ಎಂದರು.