Mysore
19
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು ಅರಮನೆ ಆವರಣದಲ್ಲಿ ಮಾಗಿ ಉತ್ಸವಕ್ಕೆ ಅದ್ಧೂರಿ ಚಾಲನೆ

ಮೈಸೂರು: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಮಾಗಿ ಉತ್ಸವಕ್ಕೆ ಚಾಲನೆ ದೊರೆತಿದೆ.

ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಮನರಂಜನಾ ಚಟುವಟಿಕೆಗಳು ಗರಿಗೆದರಿವೆ.

ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ ಸಂಭ್ರಮ ನೀಡಲು ಇಂದು ಸಂಜೆ ಮಾಗಿ ಉತ್ಸವಕ್ಕೆ ಚಾಲನೆ ದೊರೆತಿದೆ.

ಮಾಗಿ ಉತ್ಸವದ ಅಂಗವಾಗಿ 10ನೇ ವರ್ಷದ ಪುಷ್ಪ ಪ್ರದರ್ಶನ, ಸಂಗೀತ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಇಂದಿನಿಂದ ಡಿಸೆಂಬರ್.‌31ರವರೆಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ಪುಷ್ಪ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ಮಾಗಿ ಉತ್ಸವದ ಅಂಗವಾಗಿ 25 ಸಾವಿರಕ್ಕೂ ಹೆಚ್ಚು ಅಲಂಕಾರಿಕ ಹೂಕುಂಡಗಳು, ಬೋನ್ಸಾಯ್‌ ಗಿಡಗಳು, 35 ಜಾತಿಯ ಹೂವಿನ ಗಿಡಗಳ ಪ್ರದರ್ಶನ ಇರಲಿದೆ. 6 ಲಕ್ಷಕ್ಕೂ ಅಧಿಕ ಹೂಗಳಿಂದ ವಿವಿಧ ಆಕೃತಿಗಳನ್ನು ನಿರ್ಮಿಸಲಾಗಿದೆ.

ದೆಹಲಿಯ ಅಕ್ಷರಧಾಮ ದೇವಾಲಯ, ಮುಮ್ಮಡಿ ಕೃಷ್ಣರಾಜ ಒಡೆಯರ್‌, ನಂಜನಗೂಡಿನ ನಂಜುಂಡೇಶ್ವರಸ್ವಾಮಿ ದೇವಾಲಯ, ನಂದಿ, ಹದ್ದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಗಂಡಭೇರುಂಡ, ಕಾರ್ಗಿಲ್‌ ಯುದ್ಧ ಸ್ಮಾರಕ, ನವಿಲು, ಸಂವಿಧಾನ ಪೀಠಿಕೆ ಸೇರಿದಂತೆ ವಿವಿಧ ಬಗೆಯ ಆಕೃತಿಗಳನ್ನು ಹೂವುಗಳಿಂದ ನಿರ್ಮಾಣ ಮಾಡಲಾಗಿದೆ.

ಇನ್ನು ಇಂದಿನಿಂದ ಡಿಸೆಂಬರ್.‌25ರವರೆಗೆ ಸಂಗೀತ ಕಾರ್ಯಕ್ರಮ ಏರ್ಪಾಡು ಮಾಡಲಾಗಿದ್ದು, ಖ್ಯಾತ ಹಿನ್ನೆಲೆ ಗಾಯಕ ವಿಜಯ್‌ ಪ್ರಕಾಶ್‌ ಸಂಗೀತ ಕಾರ್ಯಕ್ರಮ ಈ ಬಾರಿಯ ಮಾಗಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ವಯಸ್ಕರಿಗೆ 30ರೂಪಾಯಿ, 10ರಿಂದ 18 ವರ್ಷದೊಳಗಿನವರಿಗೆ 20 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿದೆ. 10 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ದೊರೆಯಲಿದೆ.

ಡಿಸೆಂಬರ್.‌31ರಂದು ರಾತ್ರಿ 11 ರಿಂದ 12 ಗಂಟೆಯವರೆಗೆ ಪೊಲೀಸ್‌ ಬ್ಯಾಂಡ್‌ ವಾದ್ಯ ಸಂಗೀತದ ನಿನಾದ ಕಾರ್ಯಕ್ರಮ ಇರಲಿದ್ದು, ಅಂದು ರಾತ್ರಿ 12 ರಿಂದ 12.15ರವರೆಗೆ ಹಸಿರು ಪಟಾಕಿಯ ಬಾಣ ಬಿರುಸುಗಳನ್ನು ಸಿಡಿಸುವ ಮೂಲಕ ನೂತನ ವರ್ಷಕ್ಕೆ ಸ್ವಾಗತ ಕೋರುವ ಕಾರ್ಯಕ್ರಮ ಆಕರ್ಷಣೆಯಾಗಲಿದೆ.

 

Tags: