Mysore
29
clear sky

Social Media

ಶನಿವಾರ, 31 ಜನವರಿ 2026
Light
Dark

ಜಾತಿ ಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುವ ಕೆಲಸ: ಸಿದ್ದರಾಮಯ್ಯ ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ

ಮೈಸೂರು: ಸಿದ್ದರಾಮಯ್ಯ ಜಾತಿಗಣತಿ ಮೂಲಕ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು, ಸಿದ್ದರಾಮಯ್ಯ ಜಾತಿಗಣತಿ ಮೂಲಕ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ಬಿಡುಗಡೆ ಮಾಡಿ ತನ್ನ ಪಕ್ಷ ಹಾಗೂ ಪ್ರತಿಪಕ್ಷ ಇಬ್ಬರನ್ನು ಕುರಿ ಮಾಡ್ತಿದ್ದಾರೆ. ಸರ್ಕಾರದ ಪ್ರಸ್ತುತ ವೈಫಲ್ಯಗಳನ್ನು ಮರೆ ಮಾಚಲು ಸಿದ್ದರಾಮಯ್ಯ ಜಾತಿ ಗಣತಿ ಮುನ್ನೆಲೆಗೆ ಬಿಟ್ಟಿದ್ದಾರೆ. ಈ ಮೂಲಕ ಜಾತಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಹಿಂದೂ ಧರ್ಮವನ್ನು ಒಡೆಯೋಕೆ ಹೊರಟ್ಟಿದ್ದಾರೆ. ಲಿಂಗಾಯತರು, ಒಕ್ಕಲಿಗರು, ಒಬಿಸಿ ಸಂಖ್ಯೆ ಕಡಿಮೆ ಆಯ್ತು ಅನ್ನೋದಷ್ಟೆ ನೋಡಬೇಡಿ. ಒಟ್ಟಾರೆ ಹಿಂದೂಗಳ ಸ್ಥಿತಿ ಏನಾಗಿದೆ ಎಂದು ನೋಡಿ. ನಮ್ಮ‌ ಜಾತಿ‌ ಸಂಖ್ಯೆ ಕಡಿಮೆ ಆಯ್ತು ಅಂತಾ ಪರಸ್ಪರ ಮಂಗಗಳ ಥರ ಕಿತ್ತಾಡಬೇಡಿ ಹಿಂದೂಗಳಾಗಿ ಈ ಜಾತಿ ಗಣತಿ ನೋಡಿ ಎಂದು ಕಿಡಿಕಾರಿದರು.

ಸುದ್ದಿ ಹಿನ್ನೆಲೆ :- ಸಚಿವ ಸಂಪುಟ ಸಭೆಯಲ್ಲಿ ಜಾತಿ ಜನಗಣತಿ ಬಗ್ಗೆ ಚರ್ಚಿಸಿ ನಿರ್ಧಾರ  : ಸಿ. ಎಂ. ಸಿದ್ದರಾಮಯ್ಯ

ಇನ್ನು ಮುಂದುವರಿದು ಮಾತನಾಡಿದ ಅವರು, ಯಾರ ಮನೆಗೆ ಬಂದು ಜಾತಿ ಗಣತಿ ಮಾಡಿದ್ದಾರೆ? ಎಲ್ಲರನ್ನು ಸಿಎಂ ಕುರಿ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಗ ಅಹಿಂದ ಅಂತಾ ಒಂದು ವರ್ಗ ಒಡೆದರು. ಈಗ ಜಾತಿ ಗಣತಿ ಹೆಸರಲ್ಲಿ ಇಡೀ ಹಿಂದೂ ಧರ್ಮ ಒಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಗ್ಯಾರಂಟಿ ಯೋಜನೆಗಳು ಹಳ್ಳ ಹಿಡಿದಿವೆ. ದಿನದಿಂದ ದಿನಕ್ಕೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿವೆ. ಮುಡಾ ಹಗರಣ, ವಾಲ್ಮೀಕಿ ಹಗರಣ ನಡೆದಿದೆ. ಇವೆಲ್ಲವನ್ನು ಮರೆ ಮಾಚಲು ಜಾತಿಗಣತಿ ಬಿಟ್ಟಿದ್ದಾರೆ. ಇದು ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಮಾಡುತ್ತಿರುವ ನಾಟಕ. ಲಿಂಗಾಯತರಿಗೆ, ಒಕ್ಕಲಿಗರು, ಒಬಿಸಿ ಎಂದು ಉಪ ಜಾತಿ ಲೆಕ್ಕ ಹಾಕಲಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ನರಲ್ಲಿ ಯಾಕೆ ಉಪಜಾತಿ ಯಾಕೆ ಲೆಕ್ಕ ಹಾಕಿಲ್ಲ ಎಂದು ಪ್ರಶ್ನೆ ಮಾಡಿದರು.

ಇನ್ನು ವೀರಶೈವ ಲಿಂಗಾಯತ ಪ್ರತ್ಯೇಕ ಜಾತಿಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ 36 ಜನ ವೀರಶೈವ ಲಿಂಗಾಯತ ಶಾಸಕರಿದ್ದಾರೆ. ಹಾಗಾಗಿ ಅವರೆಲ್ಲಾ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಬಳಿ ಕೇಳಲಿ. ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೂಡ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಕೇಳಲಿ ಎಂದು ಆಗ್ರಹಿಸಿದರು.

Tags:
error: Content is protected !!