Mysore
30
scattered clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಶಾಲಾ-ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡಿದರೆ ಹೆಚ್ಚಿನ ದಂಡ ವಿಧಿಸಿ, ಕಠಿಣ ಶಿಕ್ಷೆ ನೀಡಿ: ಡಾ.ಪಿ.ಶಿವರಾಜು

ಮೈಸೂರು:  ಶಾಲಾ- ಕಾಲೇಜಿನ ಸುತ್ತ-ಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಹಾಗೂ ಇನ್ನಿತರ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅಂತಹ ವ್ಯಕ್ತಿ ಅಥವಾ ಅಂಗಡಿಯ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಎಚ್ಚರಿಕೆ ನೀಡಿದರು.

ಇಂದು(ಆ.23) ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ “ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆ”ಯಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜಿನ ಮಕ್ಕಳು ತಂಬಾಕು ಸೇವನೆಗೆ ಒಳಗಾಗುತ್ತಿದ್ದಾರೆ. ಶಾಲಾ ಕಾಲೇಜುಗಳ ಸುತ್ತ – ಮುತ್ತ ಇರುವ ಪೆಟ್ಟಿ ಅಂಗಡಿಗಳು ಹಾಗೂ ವ್ಯಕ್ತಿಗಳು ಯಾರಿಗೂ ತಿಳಿಯದಂತೆ ತಂಬಾಕುಗಳನ್ನು ಮಕ್ಕಳಿಗೆ ಮಾರಾಟ ಮಾಡಿ, ಮಕ್ಕಳನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. ಅಂತಹವರನ್ನು ಗುರುತಿಸಿ ಕಠಿಣ ಶಿಕ್ಷೆ ಹಾಗೂ ದಂಡವನ್ನು ವಿಧಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೆ ಅಧಿಕಾರಿಗಳು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ತಂಬಾಕು ಸೇವನೆಯ ಸಂಬಂಧ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳಿಗೆ ಅವುಗಳ ಮೂಲಕ ಜಾಗೃತಿ ಮೂಡಿಸಬೇಕು. ಇದನ್ನು ಅಧಿಕಾರಿಗಳು ನಿರ್ಲಕ್ಷಿಸದರೆ ಮುಂದೆ ನಮ್ಮ ಮಕ್ಕಳೇ ಚಟಕ್ಕೆ ಬಲಿಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಇಂದಿನಿಂದಲೇ ನಿಯಮ ಬಾಹಿರ ತಂಬಾಕು ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟಲು ಮುಂದಾಗಬೇಕು ಎಂದು ಹೇಳಿದರು.

ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವಂತಹ ಅಂಗಡಿಯ ಪರವಾನಗಿಯನ್ನು ರದ್ದು ಮಾಡಿ, ಅಂಗಡಿ ಮಾಲೀಕನಿಗೆ ದಂಡವನ್ನು ವಿಧಿಸಬೇಕು. ಸಾರ್ವಜನಿಕವಾಗಿ ತಂಬಾಕು ಸೇವನೆ ಮಾಡುವವರಿಗೆ ದಂಡ ಹಾಕಬೇಕು ಇದರ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಪ್ರಸ್ತುತ ಜಿಲ್ಲೆಯ ತಂಬಾಕು ಸೇವನೆಯ ಪ್ರಮಾಣದಲ್ಲಿ ನಾವು ನಿಯಂತ್ರಣದ ಹಂತದಲ್ಲಿದ್ದು, ಮುಂದೆ ನಿರ್ಮೂಲನೆಯ ಹಂತವನ್ನು ತಲುಪಿ ಯುವ ಪೀಳಿಗೆ ಹಾಗೂ ಮಕ್ಕಳನ್ನು ತಂಬಾಕು ಸೇವನೆಯ ಚಟದಿಂದ ಬಿಡಿಸಬೇಕು ಎಂದರು.

ಯಾವುದೇ ತಂಬಾಕು ಸಂಸ್ಥೆಗಳು ತಮ್ಮ ಬ್ರಾಂಡ್ ಹಾಗೂ ಥೀಮ್ ಗಳನ್ನು ಪ್ರಚಾರ ಮಾಡುವಂತಿಲ್ಲ. ಈಗಾಗಲೇ ಕೆಲವು ಶಾಪ್ ಗಳಲ್ಲಿ ತಂಬಾಕು ಸಂಬಂಧಿಸಿದ ಜಾಹೀರಾತುಗಳು ಏನಾದರೂ ಇದ್ದರೆ ಅವುಗಳನ್ನು ತಕ್ಷಣವೇ ತೆರವುಗೊಸುವಂತೆ ಅಂಗಡಿ ಅಥವಾ ಶಾಪ್ ಮಾಲೀಕನಿಗೆ ತಿಳಿಸಬೇಕು ಎಂದು ಹೇಳಿದರು.

ತಂಬಾಕು ಹಾಗೂ ಇತರೆ ಚಟಗಳಿಗೆ ಹೆಚ್ಚಾಗಿ ವ್ಯಸನಿಗಳಾಗುವವರು ಅನಕ್ಷರಸ್ಥರು ಹಾಗೂ ತಂಬಾಕಿನ ಪರಿಣಾಮದ ಬಗ್ಗೆ ಕಡಿಮೆ ಶಿಕ್ಷಣ ಹೊಂದಿರುವವರು. ಹಾಗಾಗಿ ಅಂತವರಿಗೆ ತಂಬಾಕಿನಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ ತಂಬಾಕು ಸೇವನೆ ಮುಕ್ತರನ್ನಾಗಿ ಮಾಡಬೇಕು ಎಂದರು.

ತಂಬಾಕು ಎನ್ ಪೊರ್ಸ್ ಮೆಂಟ್ ತಂಡದವರು ಜಿಲ್ಲೆಯಾದ್ಯಂತ ಡ್ರೈವ್ ಮಾಡುವ ಮೂಲಕ ನಿಯಮಬಾಹಿರವಾಗಿ ಸಾರ್ವಜನಿಕವಾಗಿ ಅಥವಾ ಯಾವುದೇ ಅಂಗಡಿಗಳಲ್ಲಿ ನೀಡಿರುವ ಜಾಹೀರಾತುಗಳನ್ನು ತೆರವುಗೊಳಿಸಬೇಕು. ತಂಬಾಕು ಮಾರಾಟ ಮಾಡುವ ಅಂಗಡಿಗಳನ್ನು ಗುರುತಿಸಿ ಅಂಗಡಿಗೆ ಸರಬರಾಜು ಮಾಡುತ್ತಿರುವ ತಂಬಾಕಿನ ಮೂಲ ಕಂಪನಿ ಅಥವಾ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಪಿ ಸಿ ಕುಮಾರಸ್ವಾಮಿ, ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಸವಿತಾ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags: