ಮೈಸೂರು: ಹನಿಟ್ರ್ಯಾಪ್ ಹಿಂದೆ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಕಾಂಗ್ರೆಸ್ ಪಕ್ಷದ ಯಾವ ನಾಯಕರ ವಿರುದ್ಧವೂ ಮಾತನಾಡುವ ನೈತಿಕ ಹಕ್ಕಿಲ್ಲ. ಹನಿಟ್ರ್ಯಾಪ್ ಹಿಂದೆ ಡಿಕೆಶಿ ಕೈವಾಡವಿಲ್ಲ ಎಂದು ಬ್ಯಾಟ್ ಬೀಸಿದರು.
ಇನ್ನು ಸಚಿವ ಕೆ.ಎನ್.ರಾಜಣ್ಣ ಅವರು ದೂರು ನೀಡಲು ವಿಳಂಬ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅದನ್ನು ರಾಜಣ್ಣ ಅವರ ಬಳಿಯೇ ಹೋಗಿ ಕೇಳಬೇಕು. ರಾಜಣ್ಣ ಅವರು ಗೃಹ ಸಚಿವರ ಜೊತೆ ಚರ್ಚೆ ನಡೆಸಿದ್ದಾರೆ ಎಂದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರು ಯಾರನ್ನೂ ಟಾರ್ಗೆಟ್ ಮಾಡೋಕೆ ಆಗಲ್ಲ. ರಾಜಣ್ಣ ಅವರಿಗೆ ಆದ ಅನುಭವವನ್ನು ಸದನದಲ್ಲಿ ಹೇಳಿದ್ದಾರೆ ಅಷ್ಟೇ. ತನಿಖೆ ಆದ ಬಳಿಕ ಎಲ್ಲಾ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.





