ಮೈಸೂರು: ನಮ್ಮ ಪಕ್ಷದವರಿಂದಲೇ ಹನಿಟ್ರ್ಯಾಪ್ ಆಗಿದೆ ಎಂದು ನಾವು ಎಲ್ಲೂ ಕೂಡ ಹೇಳಿಲ್ಲ ಎಂದು ಎಂಎಲ್‌ಸಿ ಸಿ ರಾಜೇಂದ್ರ ಬಿಜೆಪಿ ನಾಯಕರ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಸದನದಲ್ಲಿ ಹನಿಟ್ರ್ಯಾಪ್ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕರು ರಾಜಣ್ಣ ಹೆಸರು ತೆಗೆದುಕೊಂಡು ಹನಿಟ್ರ್ಯಾಪ್ ವಿಚಾರ ಚರ್ಚೆ ಮಾಡಿದರು. ನಾವು ಕೂಡ ಸ್ಪಷ್ಟನೆ ನೀಡಬೇಕಿತ್ತು. ಹೀಗಾಗಿ ಆ ವಿಚಾರವನ್ನು ಚರ್ಚೆ ಮಾಡಿದ್ದೇವೆ. ನಮ್ಮ ಪಕ್ಷದವರಿಂದಲೇ ಹನಿಟ್ರ್ಯಾಪ್ ಆಗಿದೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಇದರ ಹಿಂದೆ ಯಾರಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು ಎಂದು ಕೇಳಿಕೊಂಡಿದ್ದೇವೆ. ಈಗಾಗಲೇ ಸಿಐಡಿಯಿಂದ ತನಿಖೆ ಆಗುತ್ತಿದೆ. ನಮ್ಮ ತಂದೆಯವರು ದೆಹಲಿಗೆ ತೆರಳಿದ್ದಾರೆ. ಮೊನ್ನೆ ಸಿಐಡಿ ಅಧಿಕಾರಿಗಳನ್ನು ಭೇಟಿ ಮಾಡಲು ಹೋಗಿದ್ದರು. ಹಬ್ಬದ ಕಾರಣ ಅವರನ್ನು ಭೇಟಿಯಾಗಿರಲಿಲ್ಲ. ಈಗ ದೆಹಲಿಯಿಂದ ಬಂದ ತಕ್ಷಣ ಸಿಐಡಿ ಅಧಿಕಾರಿಗಳನ್ನು ಭೇಟಿ ಮಾಡಿ ಹೇಳಿಕೆ ಕೊಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.





