Mysore
14
broken clouds

Social Media

ಶನಿವಾರ, 31 ಜನವರಿ 2026
Light
Dark

ರಾಜ್ಯ ಸರ್ಕಾರಕ್ಕೆ ಸರಿಯಾದ ಆರ್ಥಿಕ ಹಿಡಿತವಿಲ್ಲ: ಎಚ್‌.ವಿಶ್ವನಾಥ್‌

ಮೈಸೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅನಗತ್ಯ ಖರ್ಚುಗಳಿಂದ ಕರ್ನಾಟಕದ ಇಂದಿನ  ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಬಂದು ತಲುಪಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ವಾಗ್ದಾಳಿ ನಡೆಸಿದ್ದಾರೆ.

ನಗರದ ಜಲದರ್ಶಿನಿಯಲ್ಲಿ ಇಂದು(ಜನವರಿ.2) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಆರ್ಥಿಕ ಪರಿಸ್ಥಿತಿ ಬಗ್ಗೆ ಸರಿಯಾದ ಹಿಡಿತ ಇಲ್ಲ. ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಒಂದು ಶ್ವೇತ ಪತ್ರ ಹೊರಡಿಸಿ, ರಾಜ್ಯದಲ್ಲಿರುವ ಆರ್ಥಿಕ ಪರಿಸ್ಥಿತಿಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರೇ ನೀವು ರಾಜ್ಯದಲ್ಲಿ ಯಾವ ರೀತಿಯ ಆಡಳಿತ ನೀಡುತ್ತಿದ್ದೀರಾ? ಐಪಿಎಸ್‌ ಅಧಿಕಾರಿ ರೂಪಾ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಜಗಳ ಬೀದಿ ರಂಪಾಟವಾಗಿದೆ. ಈ ಬಗ್ಗೆ ನೀವೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅವರಿಬ್ಬರ ಜಗಳದ ಬಗ್ಗೆ ಪ್ರಶ್ನಿಸುವ ಅಧಿಕಾರವಿದೆ. ಆದರೆ ಅವರನ್ನು ಪ್ರಶ್ನಿಸಿದೇ ಮೌನವಾಗಿದ್ದೀರಿ? ಮೊದಲು ಆ ಇಬ್ಬರೂ ಅಧಿಕಾರಿಗಳನ್ನು ವಾಪಾಸ್‌ ದೆಹಲಿಗೆ ಕಳುಹಿಸಿ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಮುಂದುವರೆದ ರಸ್ತೆ ರಾಜಕೀಯ: ಪ್ರಿನ್ಸೆಸ್‌ ರಸ್ತೆ ಹೆಸರು ಬದಲಾವಣೆಗೆ ಆಕ್ಷೇಪ

ಇದೇ ಸಂದರ್ಭದಲ್ಲಿ ಪ್ರಿನ್ಸೆಸ್‌ ರಸ್ತೆಗೆ, ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೆಆರ್‌ಎಸ್‌ ರಸ್ತೆಯೇ ಪ್ರಿನ್ಸೆಸ್‌ ರಸ್ತೆ ಎಂಬುದಕ್ಕೆ ಹಲವು ದಾಖಲೆಗಳಿವೆ. ಮೈಸೂರು ಮಹಾರಾಜರು ನಾಮಕರಣ ಮಾಡಿದ ಹೆಸರನ್ನು ತೆಗೆಯುವುದು ಸರಿಯಲ್ಲ. ಮೈಸೂರು ಸಂಸ್ಥಾನಕ್ಕೆ ಮಹಾರಾಜರ ಕೊಡುಗೆ ಅಪಾರವಾಗಿದೆ. ಹೀಗಾಗಿ ಯಾವುದಕ್ಕೆ ಕಾರಣಕ್ಕೂ ಆ ರಸ್ತೆಗೆ ಮರು ನಾಮಕರಣ ಮಾಡಬಾರದು ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಹಿತೈಷಿ ಬೆಂಬಲಿಗರು ಅವರ ಹೆಸರನ್ನು ಕೆಡಿಸಲೆಂದೇ ಅವರ ಹುನ್ನಾರ ನಡೆಸುತ್ತಿರುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಮುಡಾ ಪ್ರಕರಣದಲ್ಲಿಯೂ ಸಹ 14 ಬದಲಿ ನಿವೇಶನಗಳ ಹೆಸರಿನಲ್ಲಿ ಹೆಸರು ಕೆಡಸಿದರು. ಮತ್ತೆ ಇದೀಗ ಕೆಆರ್‌ಎಸ್‌ ರಸ್ತೆಗೆ ಹೆಸರಿಡುವ ಕುರಿತು ಹೆಸರು ಕೆಡಿಸುತ್ತಿದ್ದಾರೆ. ನಾನು ಸಿದ್ದರಾಮಯ್ಯ ಅವರ ಸ್ನೇಹಿತನಾಗಿ ಹೇಳುತ್ತಿದ್ದೇನೆ, ಅವರು 40 ವರ್ಷದ ರಾಜಕೀಯ ಜೀವನದಲ್ಲಿ ಉತ್ತಮ ರೀತಿಯ ಆಡಳಿತವನ್ನು ನೀಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಅವರ ಹೆಸರು ಕೆಡಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದ್ದಾರೆ.

Tags:
error: Content is protected !!