ಮೈಸೂರು: ಕೆಆರ್‌ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ದೇವನೂರು ಬಡಾವಣೆ ಹಾಗೂ ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಹೆಸರನ್ನೇ ಇಡಿ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಯಲ್ಲಿರುವ ಕೆಆರ್‌ಎಸ್ ರಸ್ತೆ ಮರುನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಪ್ರಿನ್ಸೆಸ್ ರಸ್ತೆ ಬದಲಾವಣೆ ಮುನ್ನೆಲೆಗೆ ಬಂದಾಗಿನಿಂದಲೂ ಸಿಎಂ ಮೌನವಾಗಿದ್ದಾರೆ. ಸಿಎಂ ರಸ್ತೆ ವಿಷಯದಲ್ಲಿ ಜಾಣ ಮೌನ ತಾಳಿದ್ದಾರೆ. ಮುಡಾದ ಕೆಸರೆ ಗ್ರಾಮ ಬಂತಲ್ಲ ಅದಕ್ಕೂ ಕೂಡ ಸಿದ್ದರಾಮಯ್ಯರ ಹೆಸರಿಡಿ. ಅದನ್ನು ಬಿಟ್ಟು ರಾಜಮನೆತನದ ಹೆಸರು ಯಾಕೆ ತೆಗಿತೀರಾ ಎಂದು ಟಾಂಗ್ ನೀಡಿದರು.
ಇನ್ನು ಬಸ್ ಪ್ರಯಾಣ ದರ ಏರಿಕೆ ಸಂಬಂಧ ಮಾತನಾಡಿದ ಅವರು, ದರ ಹೆಚ್ಚಳ ಬರೀ ಜನರಿಗೆ ಮಾತ್ರ. ಮಂತ್ರಿಗಳಿಗೆ ದರ ಹೆಚ್ಚಳ ಅನ್ವಯವಾಗಲ್ಲ. ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ಇದು ಜನರಿಗೆ ಕಷ್ಟಕೊಟ್ಟು ಖುಷಿ ಪಡುವ ಸರ್ಕಾರ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಿ ಮಂತ್ರಿಗಳ ಅಭಿವೃದ್ಧಿಯಾಗುತ್ತಿದೆ. ಜನರ ಅಭಿವೃದ್ಧಿ ಯಾರಿಗೆ ಬೇಕು. ಎಲ್ಲದಕ್ಕೂ ಕೂಡ ಪರ್ಸಂಟೇಜ್ ಕೇಳುತ್ತಾರೆ. ಆಶ್ರಯ ಮನೆಗಳಿಗೂ ವಿಧಾನಸಭೆಯಲ್ಲಿ ಈಗ ವಸೂಲಿ ಶುರು ಆಗಿದೆಯಂತೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಆಪರೇಷನ್ ಹಸ್ತದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆಪರೇಷನ್ ಹಸ್ತ ನಡೆಯುತ್ತಲೇ ಇದೆ. ನಮ್ಮಲ್ಲಿ 18 ಜನ ಶಾಸಕರಿದ್ದಾರೆ. ಎಲ್ಲರೂ ಒಟ್ಟಾಗಿದ್ದಾರೆ. ಈ ಬಗ್ಗೆ ಹರೀಶ್ ಗೌಡ ಸಹ ಸ್ಪಷ್ಟನೆ ನೀಡಿದ್ದಾರೆ. ಶಾಸಕರು ಅಂದ ಮೇಲೆ ಒತ್ತಡವಂತೂ ಇದ್ದೇ ಇರುತ್ತೆ. ನಮ್ಮ ಶಾಸಕರು ಎಲ್ಲೂ ಹೋಗಲ್ಲ. ನಮ್ಮ ಜೊತೆಯೇ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.




