ಮೈಸೂರು: ರಾಜ್ಯ ಸರ್ಕಾರ ಗ್ಯಾರಂಟಿ ನಿಲ್ಲಿಸಲು ಕಾರಣ ಹುಡುತ್ತಿದ್ದು, ಶೇಕಡಾ 15ರಷ್ಟು ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಮಧ್ಯಮ ವರ್ಗದ ಜನರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.5) ಬಸ್ ಪ್ರಯಾಣ ದರ ಏರಿಕೆ ಮಾಡಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಹೇಗಾದರೂ ಮಾಡಿ ನಿಲ್ಲಿಸಲು ಕಾರಣ ಹುಡುಕುತ್ತಿದೆ. ಅಲ್ಲದೇ ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆಯಲು ಇಂದಿನ ಮಧ್ಯರಾತ್ರಿಯಿಂದಲೇ ಶೇಕಡಾ.15 ರಷ್ಟು ಬಸ್‌ನ ಪ್ರಯಾಣ ದರವನ್ನು ಏರಿಕೆ ಮಾಡಿದೆ. ಬಸ್‌ನಲ್ಲಿ ಪ್ರತಿನಿತ್ಯ ಪ್ರಯಾಣ ಮಾಡುವುದು ಶ್ರೀಮಂತ ವರ್ಗದ ಜನರೋ ಅಥವಾ ಮಂತ್ರಿಗಳೋ, ಅವರ ಮಂತ್ರಿಗಳ ಮಕ್ಕಳಲ್ಲ. ಬಸ್‌ನಲ್ಲಿ ಪ್ರಯಾಣ ಮಾಡುವುದು ಕೂಲಿ ಕಾರ್ಮಿಕರು, ಸಾಮಾನ್ಯ ಮಧ್ಯಮ ವರ್ಗದ ಜನರು ಹಾಗೂ ಶ್ರಮ ವರ್ಗದವರು. ಹೀಗಾಗಿ 15ರಷ್ಟು ದರವನ್ನು ಏರಿಕೆ ಮಾಡಿ ಯಾವ ಸಾಧನೆಯನ್ನು ಮಾಡಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನನ್ನ ವಿರೋಧವಿಲ್ಲ. ಅದನ್ನು ಮುಂದುವರೆಸಿ, ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ. ಅವುಗಳಿಂದ ಸಾಕಷ್ಟು ಜನರಿಗೆ ಒಳ್ಳೆಯದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದೀಗ ಬಸ್ ದರವನ್ನು ಏರಿಕೆ ಮಾಡಿ ಜನರಿಂದಲೇ ಕಿತ್ತುಕೊಂಡು ಜನರಿಗೆ ನೀಡುವ ಕಾರ್ಯವನ್ನು ಮಾಡಬಾರದು. ಒಂದು ರೀತಿಯಲ್ಲಿ ಹೇಳುವುದಾದರೆ ಅತ್ತೆಯ ಆಸ್ತಿಯನ್ನು ಅಳಿಯ ದಾನ ಮಾಡಿದ ಎನ್ನುವ ಮಾತಿನಂತೆ ಅವರಿಂದಲೇ ಕಿತ್ತುಕೊಂಡು ಅವರಿಗೆ ನೀಡುವುದಕ್ಕೆ ಈ ಸರ್ಕಾರವೇ ಬೇಕಾ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಅವಧಿಯಲ್ಲಿ ಶೇಕಡಾ.60 ರಷ್ಟು ಲಂಚ ತಲುಪಿದೆ. ಅದನ್ನು ಸ್ವತಃ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಮನೆ ಹಂಚಿಕೆಯಲ್ಲೂ ಲಂಚ ಪಡೆಯುತ್ತಿದ್ದು, ಮೊದಲು ಪಿಡಿಒ ಲಂಚ ಪಡೆಯುತ್ತಿದ್ದ. ಆದರೆ ಇದೀಗ ವಿಧಾನಸೌಧದಲ್ಲಿ ಸಚಿವರೇ ಲಂಚ ಪಡೆಯುತ್ತಿದ್ದಾರೆ. ಸತ್ಯಮೇವಾ ಜಯತೇ ಎಂದು ಹೇಳುವ ಸಿದ್ದರಾಮಯ್ಯ ಆ ರೀತಿ ನಡೆದುಕೊಳ್ಳುತ್ತಿದ್ದಾರಾ? ಎನ್ನುವ ಬಗ್ಗೆ ಅವರ ಆತ್ಮಕ್ಕೆ ಉತ್ತರ ಕೊಟ್ಟುಕೊಳ್ಳಲಿ ಎಂದು ಹೇಳಿದ್ದಾರೆ.
ಹಣ ಲೂಟಿ ಮಾಡುವುದಕ್ಕೆ ಕಾಂಗ್ರೆಸ್‌ಗೆ ಇತಿಮಿತಿ ಇಲ್ವಾ? ಇದನ್ನು ನೋಡುತ್ತಿದ್ದರೆ, ಹಿಂದಿನ ಬಿಜೆಪಿ ಸರ್ಕಾರವೇ ಚೆನ್ನಾಗಿತ್ತು ಎಂದು ಕಾಂಗ್ರೆಸ್ ವಿರುದ್ಧ ಗುತ್ತಿಗೆದಾರರು ಹೇಳುತ್ತಿದ್ದಾರರ. ಇದಕ್ಕೆಲ್ಲಾ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರವೇ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.




