ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಕ ಹಾಕುವುದು ಕಡ್ಡಾಯ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಹೇಳಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಪುಷ್ಪ ಅಮರನಾಥ್ ಅವರು, ಜನರಿಗಾಗಿಯೇ ಜಾರಿ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ಅಧಿಕಾರಿಗಳ ಆದ್ಯ ಕರ್ತವ್ಯ.
ಪ್ರಸ್ತುತ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ಮೈಸೂರು 5ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಮಾಡುವುದೇ ನಮ್ಮ ಗುರಿ.
ಈ ಹಿನ್ನೆಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಇನ್ನೂ ಹೆಚ್ಚಿನ ಪ್ರಚಾರದ ಅವಶ್ಯಕತೆಯಿದೆ. ಹಾಗಾಗಿ ಸರ್ಕಾರಿ ಕಚೇರಿಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಕ ಹಾಕುವುದು ಕಡ್ಡಾಯ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಸಿಇಓ ಕೆ.ಎಂ.ಗಾಯಿತ್ರಿ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.