ಮೈಸೂರು : ಸಮಾಜ ಕಲ್ಯಾಣ ಇಲಾಖೆಯು ಸಂಶೋಧನಾ ವಿದ್ಯಾರ್ಥಿಗಳ ಎಸ್.ಸಿ.ಎಸ್.ಪಿ – ಟಿ.ಎಸ್.ಪಿ ಅನುದಾನದ ಸಂಬಂಧವಾಗಿ ಹೊರಡಿಸಿದ್ದ ಹೊಸ ಆದೇಶನ್ನು ಹರಿದು ಹಾಕುವ ಮೂಲಕ ಸಂಶೋಧಕರು ಪ್ರತಿಭಟನೆ ನಡೆಸಿದರು.
ಶುಕ್ರವಾರ ಬೆಳಿಗ್ಗೆ ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ವತಿಯಿಂದ ಮಾನಸ ಗಂಗೋತ್ರಿಯ ಅಂಬೇಡ್ಕರ್ ಪುತ್ಥಳಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಆದೇಶದ ಪ್ರತಿಯನ್ನು ಹರಿದುಹಾಕುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.
ಸರ್ಕಾರದ ವತಿಯಿಂದ ದಲಿತ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತೀ ವರ್ಷವು ನೀಡುತ್ತಿದ್ದ ಎಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಅನುದಾನವನ್ನು ಈ ಸಾಲಿನಿಂದ ತಡೆ ಹಿಡಿದು, ಹೊಸ ಆದೇಶವನ್ನು ಹೊರಡಿಸಿದ್ದು, ಹೊಸ ಆದೇಶವು ಅವೈಜ್ಞಾನಿಕ ಮತ್ತು ದಲಿತ ವಿದ್ಯಾರ್ಥಿಗಳನ್ನು ಹತ್ತಿಕ್ಕುವ ಹುನ್ನಾರ ಅಡಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದರು.
ಈ ಆವೈಜ್ಞಾನಿಕ ಆದೇಶವನ್ನು ರದ್ದುಪಡಿಸಿ, ಸಂಶೋಧನಾ ವಿದ್ಯಾರ್ಥಿಗಳಿಗೆ ನ್ಯಾಯವಾಗಿ ದೊರಕಬೇಕಾದ ಅನುದಾನ ನೀಡುವಂತೆ ಒತ್ತಾಯಿಸಲಾಯಿತು. ಒಂದು ವೇಳೆ ಹೊಸ ಆದೇಶವನ್ನು ಹಿಂಪಡೆಯದಿದ್ದರೇ ರಾಜ್ಯದಾದ್ಯಂತ ಪ್ರತಿ ವಿವಿಗಳಲ್ಲೂ ಪ್ರತಿಭಟನೆ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ಸದಸ್ಯರುಗಳಾದ ಕಾರ್ತಿಕ್ ಲಿಂಗರಾಜು, ಪ್ರದೀಪ್ ಮುಮ್ಮಡಿ, ವರಹಳ್ಳಿ ಆನಂದ, ಲಿಂಪನ್ ರಾಜು, ಕಿರಣ್, ನಟರಾಜ್, ಪೇಪರ್ ಬಾಬು, ಶಶಿಕುಮಾರ್ ದೀಪು ಪ್ರಸಾದ್, ವಿಶ್ವಪ್ರಸಾದ್, ಮಲ್ಲೇಶ್, ಶೇಷಣ್ಣ, ಧೀರಜ್, ಯೋಗೇಶ್ ಮುಂತಾದವರು ಹಾಜರಿದ್ದರು.





