ಮೈಸೂರು: ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸಂಪೂರ್ಣ ದಿವಾಳಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಆಸೆ ತೋರಿಸಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಕರ್ನಾಟಕ ರಾಜ್ಯ ಸಂಪೂರ್ಣ ದಿವಾಳಿಯಾಗಿದೆ. ಶಕ್ತಿ ಯೋಜನೆಯಿಂದ ಕೆಎಸ್‌ಆರ್‌ಟಿಸಿ ದಿವಾಳಿ ಆಗಿದೆ. ಮನೆಯ ಯಜಮಾನಿಯರಿಗೆ ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಕಳೆದ ಮೂರು ತಿಂಗಳಿನಿಂದಲೂ ಹಣ ಜಮೆಯಾಗಿಲ್ಲ. ನಿರುದ್ಯೋಗ ಭತ್ಯೆ ಎನ್ನುವ ಯುವನಿಧಿ ಇನ್ನೂ ಶುರು ಆಗಿಲ್ಲ ಎಂದರು.
ಇನ್ನು ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ನಿಂತುಹೋಗಿವೆ. ಕಸಕ್ಕೂ ಟ್ಯಾಕ್ಸ್ ಹಾಕುತ್ತಿದ್ದಾರೆ. 48 ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಗ್ಯಾರಂಟಿ ಸ್ಕೀಂಗಳಿಗೆ ಹಣ ಹೊಂದಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಮಾಡುತ್ತಿಲ್ಲ. ಜನರಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬರೀ ಹಗರಣಗಳಿಂದಲೇ ಸರ್ಕಾರ ಸದ್ದು ಮಾಡುತ್ತಿದೆ. ಈ ಎಲ್ಲದರ ಮಧ್ಯೆ ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರವನ್ನು ಮುಂದಕ್ಕೆ ಬಿಟ್ಟಿದ್ದಾರೆ. ಈ ಮೂಲಕ ಹಿಂದೂ ಸಮಾಜವನ್ನು ಒಡೆಯಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇದು ಮುಸ್ಲಿಂ ಜನಾಂಗ ಜಾಸ್ತಿ ಇದೆ ಎಂದು ತೋರಿಸುವ ಹುನ್ನಾರ ಅಷ್ಟೇ ಎಂದು ಗಂಭೀರ ಆರೋಪ ಮಾಡಿದರು.





