Mysore
18
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸರ್ಕಾರಿ ಉದ್ಯೋಗಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ : ದೂರು ದಾಖಲು

ಮೈಸೂರು : ಸರ್ಕಾರಿ ಉದ್ಯೋಗಿ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡ ವಂಚಕನೋರ್ವ, ಆಕೆಯ ಬಳಿ ಇದ್ದ 500 ಗ್ರಾಂ ಚಿನ್ನದ ಆಭರಣಗಳು ಹಾಗೂ 10.50 ಲಕ್ಷ ರೂ. ಹಣವನ್ನು ಲಪಟಾಯಿಸಿರುವ ಘಟನೆ ನಡೆದಿದೆ.

ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿರುವ ಹಾಗೂ ವಿಜಯನಗರದಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಮಹಿಳೆಗೆ ಫೇಸ್‌ಬುಕ್ ಮೂಲಕ ತಮಿಳುನಾಡಿನ ತಿರುವಂತಪುರಂ ಮೂಲದ ವೈದ್ಯ ಡಾ.ಎ.ಎಂ.ಶಿವಕುಮಾರ್ ಪರಿಚಯವಾಗಿದ್ದಾನೆ.

ನಂತರ ಆಕೆಗೆ ಆತ್ಮೀಯನಂತೆ ನಟಿಸಿದ ವಂಚಕ ಮಹಿಳೆಯ ಮನೆಗೆ ಆಗಾಗ್ಗೆ ಬರುತ್ತಿದ್ದ. ನಂತರ ಆಕೆಯೊಂದಿಗೆ ಮಾತನಾಡಿದ ಆತ, ಒಂಟಿಯಾಗಿರುವ ನೀವು ಚಿನ್ನಾಭರಣವನ್ನು ಜೊತೆಯಲ್ಲಿ ಇಟ್ಟುಕೊಳ್ಳಬೇಡಿ. ಬ್ಯಾಂಕ್‌ನ ಲಾಕರ್‌ನಲ್ಲಿ ಇಡಿ ಎಂದು ಹೇಳಿ ಆತನೇ ಬ್ಯಾಂಕ್‌ಗೆ ಕರೆದೊಯ್ದು ಲಾಕರ್‌ನಲ್ಲಿ ಚಿನ್ನಾಭರಣಗಳನ್ನು ಇರಿಸುವಂತೆ ನಾಟಕವಾಡಿ ನಕಲಿ ಕೀಲಿಯನ್ನು ನೀಡಿದ್ದಾನೆ.

ನಂತರ ನಿಮ್ಮ ಬಳಿ ಇರುವ ಹಣವನ್ನು ವ್ಯಾಪಾರದಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಸೆ ಹುಟ್ಟಿಸಿದ ಆತ, ಅವರ ಬಳಿ ಇದ್ದ 10.50 ಲಕ್ಷ ರೂ. ಹಣವನ್ನು ಪಡೆದಿದ್ದಾನೆ. ನಂತರ ಆತನ ಕೈಲಿ ವಜ್ರದ ಉಂಗುರ ಇದ್ದುದನ್ನು ಗಮನಿಸಿದ ಆಕೆ ಈ ಬಗ್ಗೆ ಪ್ರಶ್ನಿಸಿದ್ದಾರೆ.

ನಾನು ಲಾಕರ್‌ನಲ್ಲಿ ಇಟ್ಟಿದ್ದ ಉಂಗುರ ನಿನ್ನ ಕೈಲಿ ಹೇಗೆ ಬಂತು ಎಂದು ದಬಾಯಿಸಿ, ನನ್ನ ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ನಿಡುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಆತನೇ ಆಕೆಯ ಮೇಲೆ ಹರಿಹಾಯ್ದಿದ್ದಾನೆ.
ಇದರಿಂದಾಗಿ ತಾನು ವಂಚನೆಗೆ ಒಳಗಾಗಿರುವುದು ಆಕೆಗೆ ಗೊತ್ತಾಗಿದೆ. ಕೂಡಲೇ ಅವರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

Tags:
error: Content is protected !!