Mysore
19
overcast clouds
Light
Dark

ಭಾರತೀಯರೆಲ್ಲರ ಹೃದಯದಲ್ಲಿ ದೀಪ ಹಚ್ಚಿಸುವುದೇ ಸ್ವಾತಂತ್ರ್ಯ – ಡಾ. ಪಿ ಶಿವರಾಜು

ಹರ್ ಘರ್ ತಿರಂಗ ಕಾರ್ಯಕ್ರಮ

ಮೈಸೂರು: ಭಾರತೀಯರೆಲ್ಲರ ಹೃದಯದಲ್ಲಿ ದೀಪ ಹಚ್ಚುವುದೇ ಸ್ವಾತಂತ್ರ್ಯ. ಇದು ನಮಗೆ ಸುಮ್ಮನೆ ದಕ್ಕಿದ್ದಲ್ಲ. ಇದಕ್ಕಾಗಿ ಲಕ್ಷಾಂತರ ಜನರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಇದರ ಜವಾಬ್ದಾರಿ ಅರಿತು ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ. ಶಿವರಾಜು ಹೇಳಿದರು.

ಇಂದು(ಆ.14) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹರ್ ಘರ್ ತಿರಂಗ ಕಾರ್ಯಕ್ರಮದ ಅಂಗವಾಗಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಗಾಳಿಪಟ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ, ಅಪಾರ ಬೆಲೆ ತೆತ್ತು ನಮಗೆ ಸ್ವಾತಂತ್ರ್ಯ ತಂದು ಕೊಟ್ಟಂತಹ ಮಹಾನ್ ವ್ಯಕ್ತಿಗಳನ್ನು ಈ ಸಮಯದಲ್ಲಿ ನೆನೆಯುತ್ತಾ, ದೇಶಕ್ಕೆ ನಮ್ಮದೇ ಆದ ಕೊಡುಗೆಯನ್ನು ನೀಡಿ ಅವರ ಋಣವನ್ನು ತೀರಿಸಬೇಕು ಎಂದರು.

ಯಾವುದೇ ಒಬ್ಬ ವ್ಯಕ್ತಿಗೆ ಆತನ ಸ್ವಾತಂತ್ರ್ಯವನ್ನು ಕಿತ್ತುಕೊಂಡು, ಆತನಿಗೆ ಮತ್ತೇನಾದರೂ ಕೊಟ್ಟರು ಅದು ಶೂನ್ಯವಾಗಿರುತ್ತದೆ. ಅದರಲ್ಲಿಯೂ ನಮ್ಮ ಭಾರತ ದೇಶ ನಿಂತಿರುವುದೇ ಭಾವನೆಗಳ ಮೇಲೆ. ಇಲ್ಲಿನ ಜನರು ಒಬ್ಬರಿಂದ ಒಬ್ಬರು ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ. ಇಂತಹ ದೇಶದಲ್ಲಿ ಸ್ವಾತಂತ್ರ್ಯ ಎಂಬುದು ಬಹಳ ಪ್ರಮುಖವಾಗಿದ್ದು, ಅದನ್ನು ನಾವು ಇಂದು ಅನುಭವಿಸುತ್ತಿದ್ದೇವೆ ಎಂದು ಹೇಳಿದರು.

ಹರ್ ಘರ್ ತಿರಂಗ ಎಂದರೆ ಎಲ್ಲರ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು. ಆ ನಿಟ್ಟಿನಲ್ಲಿ ಇಂದು ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದ್ದು, ನಾವು ದೇಶಕ್ಕಾಗಿ ಏನೆಲ್ಲಾ ಕೊಡುಗೆ ನೀಡಬೇಕು ಎಂಬುದನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಇದರ ಸಂಕೇತವೇ ಗಾಳಿಪಟ. ಭೂಮಿಯ ಮೇಲಿದ್ದಂತಹ ಗಾಳಿಪಟವನ್ನು ಗಾಳಿಯಲ್ಲಿ ಹಾರಲು ಬಿಟ್ಟಾಗ ಅದು ಉತ್ತುಂಗಕ್ಕೆ ಹೋಗುತ್ತದೆ ಅದೇ ರೀತಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಹೊಂದಿ, ಅದರಲ್ಲಿ ಉತ್ತುಂಗಕ್ಕೆ ಹೋಗುವುದರ ಮೂಲಕ ದೇಶಕ್ಕೆ ಹೆಮ್ಮೆ ಹಾಗೂ ಗೌರವ ತರಬೇಕು ಎಂದು ಸಲಹೆ ನೀಡಿದರು.

ನಮ್ಮ ದೇಶ ಬಹು ಜನಸಂಖ್ಯಾವುಳ್ಳ ಬೃಹತ್ ದೇಶವಾಗಿದೆ. ಇಲ್ಲಿನ ಪ್ರತಿಯೊಬ್ಬ ಪ್ರಜೆಯು ರಾಷ್ಟ್ರದ ಮಹತ್ವವನ್ನು ಅರಿತು ರಾಜ್ಯ ಹಾಗೂ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ.ಡಿ ಸುದರ್ಶನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.