ಮೈಸೂರು : ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣದ ಮೇಲೆ ಸಾಲ ನೀಡುವುದಾಗಿ ನಂಬಿಸಿ ಗ್ರಾಹಕರಿಂದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ಚಿನ್ನದಂಗಡಿಯ ಮಾಲೀಕನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಜಯನಗರದ ತ್ರಿನೇತ್ರ ಸರ್ಕಲ್‌ನ ಬಳಿ ಇರುವ ಸ್ಟಾರ್‌ಗೋಲ್ಡ್ ಕಂಪೆನಿ ಹೆಸರಿನ ಚಿನ್ನದಂಗಡಿ ಮಾಲೀಕ ಯೋಗೇಶ್ ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಸ್ಟಾರ್‌ಗೋಲ್ಡ್ ಕಂಪೆನಿ ಹೆಸರಿನಲ್ಲಿ ಚಿನ್ನದಂಗಡಿ ತೆರೆದು ಅತೀ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಅತೀ ಹೆಚ್ಚು ಸಾಲ ಕೊಡುವುದಾಗಿ ಗ್ರಾಹಕರನ್ನು ನಂಬಿಸಿ ಅವರು ಅಡಮಾನ ಇರಿಸಿದ ಚಿನ್ನವನ್ನು ಅಕ್ರಮ ವಾಗಿ ತನ್ನ ಲಾಭಕ್ಕಾಗಿ ಗ್ರಾಹಕರ ಗಮನಕ್ಕೆ ತರದೇ ಕರಗಿಸಿ ಒಳಗೊಳಗೇ ಮಾರಾಟ ಮಾಡಿ ಸುಮಾರು ೧೫ ಜನರಿಗೆ ಮೋಸ ಮಾಡಿ ಸುಮಾರು ೧.೫ ಕೋಟಿ ರೂ. ಮೌಲ್ಯದ ೮೫೦ ಗ್ರಾಂ ಚಿನ್ನಾಭರಣವನ್ನು ದೋಚಿದ್ದರು.
ಈ ಸಂಬಂಧ ಗ್ರಾಹಕರು ಆತನ ವಿರುದ್ಧ ವಂಚನೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯ ಪತ್ತೆಗೆ ಜಾಲ ಬೀಸಿದ್ದರು. ಶುಕ್ರವಾರ ವಿಜಯನಗರದ ಬಳಿ ಕಾರ್ಯಾಚರಣೆ ನಡೆಸಿ ಯೋಗೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




