ಮೈಸೂರು: ನಗರದ ಹೊರವಲಯದ ಹಳೆ ಕೆಸರೆ ಸಮೀಪದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಕಸದ ರಾಶಿ ಹೊತ್ತಿ ಉರಿದ ಘಟನೆ ನಡೆದಿದೆ.
ಬಿಸಿಲಿನ ತೀವ್ರತೆಯಿಂದಾಗಿ ಕಸ ವಿಲೇವಾರಿ ಶೆಡ್‌ಗಳ ಒಳಭಾಗದಲ್ಲಿದ್ದ ಕಸದ ರಾಶಿಗೆ ಬೆಂಕಿ ತಗುಲಿ, ಕೆಲವೇ ಕ್ಷಣಗಳಲ್ಲಿ ದೊಡ್ಡ ಮಟ್ಟಕ್ಕೆ ವ್ಯಾಪಿಸಿದೆ.
ಬೆಂಕಿಯಿಂದ ಉಂಟಾದ ದಟ್ಟ ಹೊಗೆ ಹಳೆ ಕೆಸರೆ, ಕಾಮನಕೆರೆಹುಂಡಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳಿಗೆ ವ್ಯಾಪಿಸಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು ಆದರೆ ಅಪಾರ ಪ್ರಮಾಣದ ಕಸದ ರಾಶಿ ಇರುವುದರಿಂದ ಬೆಂಕಿ ಸಂಪೂರ್ಣ ಹತೋಟಿಗೆ ತರುವುದು ಸ್ವಲ್ಪ ತಡವಾಯಿತು.
ಇದರಿಂದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳು ಹೊಗೆ ವ್ಯಾಪಿಸಿದ ಭಯಭೀತರಾಗಿದ್ದರು. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.




