ಮೈಸೂರು: ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗಿರುವುದರಿಂದ ನಮ್ಮ ಸೈನಿಕರ ಕೈಕಟ್ಟಿ ಹಾಕಿದಂತಾಗಿದೆ ಎಂದು ಮಾಜಿ ಸೈನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ಪಾಕ್ ನಡುವೆ ಎದ್ದಿದ್ದ ಅಘೋಷಿತ ಯುದ್ಧ ಅರ್ಧದಲ್ಲೇ ನಿಂತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ್ ಮಾತನಾಡಿ, ಇದೊಂದು ಒಳ್ಳೆಯ ಅವಕಾಶ ಇತ್ತು. ಈ ಅವಕಾಶವನ್ನು ಬಳಸಿಕೊಂಡು ಪಾಪಿ ಪಾಕಿಸ್ತಾನವನ್ನು ಸದೆಬಡಿಯಬಹುದಿತ್ತು. ಪಾಕಿಸ್ತಾನವನ್ನು ಸದೆಬಡಿಯಲು ನಮ್ಮ ಸೇನೆ ಬಹಳ ಕಾತುರದಿಂದ ಕಾಯುತ್ತಿತ್ತು. ಯುದ್ಧ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನ ಕದನ ವಿರಾಮಗೊಳಿಸಿದ್ದು ನಮಗಂತೂ ಭಾರೀ ಬೇಸರ ತರಿಸಿದೆ. ನಮ್ಮ ದೇಶದಲ್ಲಿರುವ ಸುಮಾರು 14 ಲಕ್ಷಕ್ಕೂ ಹೆಚ್ಚು ಜನ ಸೈನಿಕರು ಪಾಕಿಸ್ತಾನ ಹಾಗೂ ಉಗ್ರರನ್ನು ಸದೆಬಡಿಯಲು ಸನ್ನದ್ಧರಾಗಿದ್ದರು ಎಂದರು.
ಇನ್ನು ನಮಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಬೇಕಿರಲಿಲ್ಲ. ಇದರಿಂದ ನಮ್ಮ ಸೈನಿಕರಿಗೆ ನಿರಾಸೆಯಾಗಿದೆ. ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆಗೆ ಒಪ್ಪಬಾರದಿತ್ತು. ಇದೇ ಒಂದು ಸದಾವಕಾಶ ಎಂದು ತಿಳಿದು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬಹುದಿತ್ತು. ಅಮೇರಿಕಾ ಮಧ್ಯಸ್ಥಿಕೆ ವಹಿಸಿ ಈಗ ನಾನೇ ಸೂಪರ್ ಪವರ್ ಕಂಟ್ರಿ ಎಂದು ಹೇಳಿಕೊಳ್ಳುತ್ತಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ನಮ್ಮ ಭಾರತೀಯ ಸೇನೆಗೆ ಅಪಮಾನ ಮಾಡಿದ್ದಾರೆ. ಯುದ್ಧದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದಿತ್ತು. ಈ ಬಗ್ಗೆ ರಾಷ್ಟ್ರಪತಿಗಳು ಒಂದು ನಿರ್ಧಾರ ಮಾಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದರು.





