ಮೈಸೂರು: ಚುನಾವಣೆ ವ್ಯವಸ್ಥೆ ಮೇಲೆ ಎಲ್ಲರಿಗೂ ನಂಬಿಕೆಯಿದೆ. ಆದರೆ ಅದರ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಇವಿಎಂನಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಅದರ ಬಗ್ಗೆ ಗೊತ್ತಿಲ್ಲ. ಚುನಾವಣೆ ವ್ಯವಸ್ಥೆ ಮೇಲೆ ಎಲ್ಲರಿಗೂ ನಂಬಿಕೆಯಿದೆ. ಈಗ ಅದರ ಮೇಲೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ. ಅದು ತಪ್ಪೋ ಸುಳ್ಳೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯವರು ಅವರ ಪಕ್ಷದ ಸಂಘಟನೆ ಮಾಡ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಸಂಘಟನೆಯನ್ನು ಮಾಡ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಂದಾಗುತ್ತಾರೆ. ಈಗಲೂ ಎಲ್ಲರೂ ಒಂದಾಗಿಯೇ ಹೋಗುತ್ತಿದ್ದೇವೆ. ಅವರ ಪಕ್ಷದ ಕಾರ್ಯಕರ್ತರನ್ನು ಅವರೇ ಸಂಘಟನೆ ಮಾಡಬೇಕು. ಜಿಟಿ ದೇವೇಗೌಡ ಯಾವ ರೀತಿ ಪಕ್ಷ ಕಟ್ಟಿದ್ದಾನೆ ಎಂದು ಎಚ್.ಡಿ.ದೇವೇಗೌಡರಿಗೆ ಗೊತ್ತು. ಕ್ಷೇತ್ರದ ಕೆಲಸದಿಂದ ನಾನು ಪಕ್ಷದ ವಿಚಾರವಾಗಿ ಎಲ್ಲೂ ಹೋಗಲು ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.





