Mysore
19
overcast clouds
Light
Dark

ಜಾಗೃತಿ ಕೊರತೆ ಹಾಗೂ ನಿರ್ಲಕ್ಷ್ಯ: ಮೈಸೂರಿನಲ್ಲಿ ವಿದ್ಯುತ್‌ ಶಾಕ್‌ಗೆ 250 ಜನ ಹಾಗೂ 413 ಜಾನುವಾರುಗಳು ಸಾವು

ಮೈಸೂರು: ಎಲ್ಲರ ಬಾಳಿಗೆ ಬೆಳಕಾಗಬೇಕಾಗಿರುವ ವಿದ್ಯುತ್‌ ಹಲವರ ಪಾಲಿಗೆ ಮೃತ್ಯುಕೂಪವಾಗಿದ್ದು, ಜಾಗೃತಿ ಹಾಗೂ ನಿರ್ಲಕ್ಷ್ಯದಿಂದ ವಿದ್ಯುತ್‌ ಅವಘಡಕ್ಕೆ ನೂರಾರು ಜನ ಬಲಿಯಾಗಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ವಿದ್ಯುತ್‌ ಅವಘಡಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದ್ದು, ಜನರೊಂದಿಗೆ ಜಾನುವಾರುಗಳ ಸಾವು ಕೂಡ ಹೆಚ್ಚಾಗುತ್ತಿರುವುದು ಆತಂಕದ ವಿಷಯವಾಗಿದೆ.

ಮೈಸೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ಅವಘಡದಿಂದ ಬರೋಬ್ಬರಿ 250 ಮಂದಿ ಬಲಿಯಾಗಿದ್ದಾರೆ.

ಇದರೊಂದಿಗೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ 413 ಜಾನುವಾರುಗಳು ಸಹ ಕರೆಂಟ್‌ ಶಾಕ್‌ ಹೊಡೆದು ಮೃತಪಟ್ಟಿವೆ. ಸಾಕಷ್ಟು ವಿದ್ಯುತ್‌ ಅವಘಡ ಪ್ರಕರಣಗಳಲ್ಲಿ ಸೆಸ್ಕ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವಂತಾಗಿದೆ.

ಈ ಅವಘಡ ಸಂಭವಿಸಲು ಪ್ರಮುಖ ಕಾರಣಗಳನ್ನು ಬಹಿರಂಗಪಡಿಸಲಾಗಿದ್ದು, ವಿದ್ಯುತ್ ಹರಿಯುತ್ತಿರುವ ತಂತಿ ಸ್ಪರ್ಶಿಸುವುದು, ನೆಲದ ಮೇಲೆ ಬಿದ್ದಿರುವ ತಂತಿ ತುಳಿಯುವುದು, ತಿಳುವಳಿಕೆ ಇಲ್ಲದೇ ವಿದ್ಯುತ್‌ ಉಪಕರಣಗಳನ್ನು ಬಳಸುವುದು, ವಿದ್ಯುತ್‌ ವಾಹಕಗಳ ಮಾರ್ಗದ ಬಳಿ ಕಬ್ಬಿಣದ ಸರಳು, ತಗಡು ಸ್ಪರ್ಶಿಸುವುದು, ಅನವಶ್ಯಕವಾಗಿ ವಿದ್ಯುತ್‌ ಕೆಲಸ ಮಾಡುವುದು ಸೇರಿದಂತೆ ಇತ್ಯಾದಿ ಕಾರಣಗಳನ್ನು ಹೇಳಿದೆ.