ಮೈಸೂರು : ನಗರದಲ್ಲಿ ಮಾದಕ ವಸ್ತು ಅಕ್ರಮ ಮಾರಾಟ ಮತ್ತು ಸಾಗಾಟದ ಮೇಲೆ ಸಿಸಿಬಿ ಮತ್ತು ಮಂಡಿ ಠಾಣಾ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದ್ದು, 3.14 ಗ್ರಾಂ ಎಂಡಿಎಂಎ, 580 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈ ಸಂಬಂದ ಐವರನ್ನು ಬಂಧಿಸಲಾಗಿದೆ.
ನಗರದ ಮಂಡಿ ಪೊಲೀಸ್ ಠಾಣಾ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಕ್ರಮ ಮಾದಕ ವಸ್ತು ಮಾರಾಟ ಮತ್ತು ಸಾಗಾಟದ ಮೇಲೆ ಕಣ್ಣಿಟ್ಟಿದ್ದ ಪೊಲೀಸರು, ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕಲ್ಯಾಣಗಿರಿನಗರದ ಮೊಹಮ್ಮದ್ ಕರೀಂ ಹಾಗೂ ನಿಷಾದ್ ಪಾಷ ಎಂಬವರನ್ನು ಬಂಧಿಸಿದ್ದಾರೆ.
ಜೊತೆಗೆ ಸಿಸಿಬಿ ಪೊಲೀಸರು ಮಂಡಿ ಹಾಗೂ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರತ್ಯೇಕ ಪ್ರಕರಣಗಳಲ್ಲಿ 35 ಗ್ರಾಂ ಮತ್ತು 559 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಗಳಾದ ಬಂಬೂ ಬಜಾರ್‌ನ ಸಂಜಯ್, ಹಾಗೂ ರಾಜ್‌ಕುಮಾರ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಿಂದ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡಲು ಉಪಯೋಗಿಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಜೀವ್‌ನಗರ ನಿವಾಸಿ ಮೊಹಮ್ಮದ್ ಅಫಾಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಮೈಸೂರು ನಗರದಲ್ಲಿ ಮಾದಕ ವಸ್ತು ಮಾರಾಟ, ಸಾಗಾಟ ಹಾಗೂ ಸೇವನೆ ಮಾಡುವವರ ಮೇಲೆ ನಗರ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.




