ಮೈಸೂರು: ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ಉನ್ನತೀಕರಣಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ೧೮೦ ಕೋಟಿ ರೂ. ಅನುದಾನ ಘೋಷಿಸಿ, ಈ ಯೋಜನೆಯಡಿ ಆಸ್ಪತ್ರೆಗೆ ೨೦೦ ಕ್ಕೂ ಹೆಚ್ಚು ಹೆಚ್ಚುವರಿ ಹಾಸಿಗೆಗಳನ್ನು ಒದಗಿಸಿರುವುದಕ್ಕೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಬಿ. ದಿನೇಶ್ ಧನ್ಯವಾದ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ನಲ್ಲಿ ಮೈಸೂರಿನ ಶ್ರೀಜಯದೇವ ಆಸ್ಪತ್ರೆಗೆ ಅನುದಾನ ಪ್ರಕಟಿಸಿದ ಹಿನ್ನೆಲೆಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು ಮಾತ್ರವಲ್ಲದೆ ಕೇರಳ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿರುವುದರಿಂದ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಉಂಟಾಗಿತ್ತು. ಪ್ರತಿದಿನ ಸುಮಾರು ೮೦೦ ರಿಂದ ೧೦೦೦ ಹೊರರೋಗಿಗಳು ತಪಾಸಣೆಗೆ ಬರುತ್ತಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿದರೆ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ಮುಂದಿನ ೧೦ ರಿಂದ ೧೫ ವರ್ಷಗಳವರೆಗೆ ಸಮಸ್ಯೆ ಎದುರಾಗುವುದಿಲ್ಲ ಎಂದು ಹೇಳಿದರು.
ಈ ಯೋಜನೆಯಿಂದ ಹೆಚ್ಚುವರಿ ವೈದ್ಯರ ನೇಮಕ, ಮೂಲಸೌಕರ್ಯ ಅಭಿವೃದ್ಧಿ, ಶಸ್ತ್ರಚಿಕಿತ್ಸೆಗಳ ಹೆಚ್ಚಳ ಮತ್ತು ರೋಗಿಗಳ ಕಾಯುವಿಕೆ ಸಮಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ರೋಗಿಗಳ ಒತ್ತಡದಿಂದ ಶಸ್ತ್ರ ಚಿಕಿತ್ಸೆಗೆ ಅವಶ್ಯಕತೆ ಇರುವವರು ಸರದಿಗಾಗಿ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಚಿಕಿತ್ಸೆಗೆಂದು ಆಗಮಿಸುವ ರೋಗಿಗಳ ಸಂಖ್ಯೆಗೆ ಹೋಲಿಸಿದರೆ ವೈದ್ಯರ ಪ್ರಮಾಣ ಸಾಲದು. ಆದರೆ ಈಗ ರಾಜ್ಯ ಸರಕಾರ ಬಜೆಟ್ ನಲ್ಲಿ ಅನುದಾನ ಘೋಷಿಸಿರುವ ಕಾರಣ, ಹೆಚ್ಚುವರಿ ವೈದ್ಯರನ್ನು ನೇಮಕ ಮಾಡಿಕೊಳ್ಳಬಹುದು. ಜತೆಗೆ ಅಪರೇಷನ್ ಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಇದರಿಂದ ರೋಗಿಗಳ ಕಾಯುವಿಕೆಯ ಪ್ರಮಾಣ ಕಡಿಮೆಯಾಗಲಿದೆ ಎಂದರು.




