ಮೈಸೂರು : ಸೈಬರ್ ವಂಚಕರು ವಾಟ್ಸಾಪ್ ಕರೆ ಮೂಲಕ ಹೂಡಿದ ಡಿಜಿಟಲ್ ಅರೆಸ್ಟ್ ಕುತಂತ್ರಕ್ಕೆ ಬಲಿಯಾಗಿ ವಿವೇಕಾನಂದ ನಗರದ ಹಿರಿಯ ನಾಗರಿಕ ದಂಪತಿ ೧ ಕೋಟಿ ೫೦ ಸಾವಿರ ರೂ. ಕಳೆದುಕೊಂಡಿದ್ದು, ಈ ಸಂಬಂಧ ನಗರದ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.೨ರಂದು ವಾಟ್ಸಾಪ್ ಕರೆ ಮಾಡಿ, ಟ್ರಾಯ್‌ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ ಸೈಬರ್ ವಂಚಕರು, ನಿಮ್ಮ ಆಧಾರ್ ದುರುಪಯೋಗವಾಗಿದೆ ಎಂದು ಬೆದರಿಸಿದ್ದಾರೆ. ಅಲ್ಲದೆ, ಕರೆಯನ್ನು ಮುಂಬೈ ಸೈಬರ್ ಬ್ರಾಂಚ್‌ಗೆ ವರ್ಗಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಬಳಿಕ ವಾಟ್ಸಾಪ್‌ನಲ್ಲಿ ವಿಡಿಯೋ ಕರೆ ಮಾಡಿದ ವಂಚಕರು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದು, ನಿಮ್ಮ ಎಲ್ಲಾ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಬೇಕು. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ನಮಗೆ ವರ್ಗಾಯಿಸಬೇಕೆಂದು ಸೂಚನೆ ನೀಡಿದ್ದಾರೆ.
ಇದನ್ನು ನಂಬಿದ ದಂಪತಿ, ತಮ್ಮ ಬ್ಯಾಂಕ್ ಖಾತೆಯಿಂದ ೪೦ ಲಕ್ಷ ರೂ. ಮತ್ತು ಅವರ ಪತ್ನಿ ಖಾತೆಯಿಂದ ೬೦,೫೦,೦೦೦ ರೂ. ಹಣವನ್ನು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗೆ ಕಳುಹಿಸಿದ್ದಾರೆ. ವಂಚಕರು ಹೇಳಿದಂತೆ ಮೂರು ದಿನಗಳಾದರೂ ವಾಪಸ್ ತಮ್ಮ ಖಾತೆಗೆ ಹಣ ಬಾರದಿದ್ದಾಗ ವಂಚನೆಗೆ ಒಳಗಾಗಿರು ವುದು ಮನವರಿಕೆಯಾಗಿದೆ. ಈ ಸಂಬಂಧ ಮೋಸ ಹೋದ ದಂಪತಿ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿದೆ.





