ಮೈಸೂರು: ಆಪ್ ಪಕ್ಷದ ವ್ಯಾಪಕ ಭ್ರಷ್ಟಚಾರದಿಂದ ಬಸವಳಿದಿದ್ದ ದೆಹಲಿಯ ಜನತೆ ವಿಧಾನಸಭೆ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಬಹುಮತ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಸಂತಸ ವ್ಯಕ್ತಪಡಿಸಿದ್ದಾರೆ.
ಇಂದು (ಫೆ.8) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 27 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೆಹಲಿಯಲ್ಲಿ ಬಿಜೆಪಿ ಗದ್ದುಗೆ ಏರಿದೆ. ಇದಕ್ಕೆ ಪ್ರಧಾನಿ ನರೇದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರು ಕಾರಣಕರ್ತರು ಎಂದರು.
ವಿರೋಧ ಪಕ್ಷಗಳ ಭ್ರಷ್ಟಚಾರ ಮುಂದೆ ಇಟ್ಟುಕೊಂಡು ವ್ಯವಸ್ಥಿತವಾಗಿ ಪ್ರಚಾರ ಮಾಡಿದ ಕಾರಣ ದೆಹಲಿಯ ಜನರು ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೈಲಿಗೆ ಹೋದರೂ ಜೈಲಿನಲ್ಲಿಯೇ ಆಡಳಿತ ನಡೆಸುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆ ವಿರುದ್ಧವಾಗಿ ನಡೆದುಕೊಂಡರು. ಹಾಗೆಯೇ, ಎಎಪಿ ಪಕ್ಷದ ವ್ಯಾಪಕ ಭ್ರಷ್ಟಚಾರದಿಂದ ನೊಂದಿದ್ದ ದೆಹಲಿ ಜನತೆ ಈ ಬಾರಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿಯೂ ಭ್ರಷ್ಟಚಾರ ಆರೋಪ ಹೊತ್ತಿರುವವರ ನೇತೃತ್ವದ ಸರ್ಕಾರ ಆಡಳಿತ ನಡೆಸುತ್ತಿದೆ. ಮುಂದೆ ನಡೆಯುವ ಚುನಾವಣೆಗಳಲ್ಲಿ ದೆಹಲಿಯ ಮಾದರಿಯಲ್ಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಬಿಕ್ಕಟ್ಟು ಮನಸ್ಸಿಗೆ ತುಂಬಾ ನೋವಾಗಿದೆ. ಪಕ್ಷದ ಕಾರ್ಯಕರ್ತರಿಗೂ ಇವರ ನಡವಳಿಕೆ ಬೇಸರ ತರಿಸಿದೆ. ಬಿಜೆಪಿ ಹೈಕಮಾಂಡ್ ಚುನಾವಣೆಯತ್ತ ಗಮನ ಹರಿಸಿದ್ದ ಕಾರಣ ರಾಜ್ಯದ ವಿದ್ಯಮಾನದ ಬಗ್ಗೆ ಗಮನ ನೀಡಿರಲಿಲ್ಲ. ಈಗ ಚುನಾವಣೆ ಮುಗಿದಿದೆ. ಸದ್ಯದಲ್ಲೇ ರಾಜ್ಯ ಬಿಜೆಪಿ ನಾಯಕರ ಬಿಕ್ಕಟ್ಟು ಬಗೆಹರಿಸುವ ವಿಶ್ವಾಸವಿದೆ ಎಂದು ಹೇಳಿದರು.